ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಬದ್ದ: ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಮಾ. 31: ‘ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಜಿಲ್ಲೆಯ ಹೊಸನಗರ ಪಟ್ಟಣದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ತಾಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ, ಜಾತಿ ಒಗ್ಗೂಡಿಸಿ ಸಾಮಾಜಿಕ ನ್ಯಾಯ ನೀಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಮೀಸಲಾತಿ, ಭೂ ಒಡೆತನ, ಬಗರ್‍ಹುಕುಂ ಸೇರಿದಂತೆ ಮೊದಲಾದ ಸಮಾನತೆಯ ಮಂತ್ರ ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ. 1967 ರ ಶಾಸನಸಭೆ ಪ್ರವೇಶಿಸಿದ ನಾನು ನನ್ನ ರಾಜಕೀಯ ಜೀವನಕ್ಕೆ ಹೊಸ ತಿರುವು ಪಡೆದೆ. ಶಾಸಕರ ಸ್ಥಾನದ ಮಹತ್ವ ಅರಿತು ಶಾಸನ ಸಭೆಗೆ ಚ್ಯುತಿ ಬಾರದಂತೆ ಹಲವು ಮಹತ್ತರ ಶಾಸನಗಳನ್ನು ಮಂಡಿಸಿ ಶಾಸನ ಸಭೆಗೆ ಗೈರಾಗದೇ ಕರ್ತವ್ಯ ಪ್ರಜ್ಞೆ ಮರೆದಿದ್ದೇನೆ. ಆದರೆ ಇಂದು ಶಾಸನ ಸಭೆಯಲ್ಲಿ ಬೆರಳೆಣಿಕೆಯ ಹಾಜರಾತಿ ಇರುವುದು ಬೇಸರದ ಸಂಗತಿ ಎಂದರು.
ತಾನು ಸ್ಪೀಕರ್ ಆಗಿದ್ದಾಗ ಸಾರ್ವಜನಿಕವಾಗಿ ದೂರವಿದ್ದೆ. ಆದರೆ ಕಂದಾಯ ಮಂತ್ರಿಯಾದ ಬಳಿಕ ಇಲಾಖೆಗೆ ಚುರುಕು ಮುಟ್ಟಿಸಿ ದಶಕಗಳ ಬಗರ್‍ಹುಕುಂ ಸಾಗುವಳಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ್ದೇನೆ. ಆದರೂ ಕೆಲ ಶಾಸಕರು ಈ ಬಗ್ಗೆ ಸೂಕ್ತ ಮಾಹಿತಿ ಹೊಂದಿಲ್ಲದಿರುವುದು ವಿಪರ್ಯಾಸ. ಸಾಗುವಳಿ ಚೀಟಿ ನೀಡದೇ ಕಂದಾಯ ಇಲಾಖಾ ಸಿಬ್ಬಂದಿಗಳು ವಿನಾಕಾರಣ ಮೀನಾಮೇಷ ಎಣಿಸುವುದಕ್ಕೆ ಬ್ರೇಕ್ ಹಾಕಿದ್ದೇನೆ ಎಂದರು.
ತಹಸೀಲ್ದಾರ್ ಗೆ ಪಕ್ಕಾಪೋಡಿ ಅಧಿಕಾರ ನೀಡಿದ್ದು, 1000 ಸರ್ವೇಯರ್ ನೇಮಕಕ್ಕೆ ಕ್ರಮ ಕೈಗೊಂಡಿದ್ದೇನೆ. ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಬಗರ್‍ಹುಕುಂ ಅರ್ಜಿ ಸಲ್ಲಿಸಲು ಡಿಸೆಂಬರ್ 2018 ರ ವರೆಗೆ ಅವಕಾಶವಿದೆ ಎಂದು ತಿಳಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ದ. ಕಾಗೋಡು ತಿಮ್ಮಪ್ಪ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆ. ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಸ್ಪರ್ಧಿಸಿದರೆ ಮಾತ್ರ ಕಾಂಗ್ರೆಸ್ ಗೆಲುವು ಸಾಧ್ಯ ಎಂದರು.
ಎ.ಪಿ.ಎಂ.ಸಿ. ಅಧ್ಯಕ್ಷ ಬಂಡಿ ರಾಮಚಂದ್ರ ಮಾತನಾಡಿ, ಕಾಗೋಡು ಸ್ಪರ್ಧೆ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ. ಸ್ಪರ್ಧೆ ಖಚಿತ ಎಂದರು.
ಜಿ.ಪಂ.ಸದಸ್ಯ ಕಲಗೋಡು ರತ್ನಾಕರ ಮಾತನಾಡಿ, ಜಿಲ್ಲೆಗೆ ಕಾಗೋಡು ನಾಯಕತ್ವ ಅಗತ್ಯವಿದೆ. ಅವರು ಅಭ್ಯರ್ಥಿಯಾದಲ್ಲಿ ಚುನಾವಣೆ ಸುಲಭ ಬೂತ್ ಮಟ್ಟದ ಸಭೆಗೆ ಚಾಲನೆ ಶೀಘ್ರದಲ್ಲೇ ದೊರೆಯಲಿದ್ದು, ರಾಜ್ಯ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ತಲುಪಿಸುವ ಕಾರ್ಯ ಕಾರ್ಯಕರ್ತರದ್ದಾಗಿದೆ ಎಂದರು.
ಜಿಲ್ಲಾಧ್ಯಕ್ಷ ತಿ.ನಾ ಶ್ರೀನಿವಾಸ್ ಮಾತನಾಡಿ, ಸಾಗರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿ ಕಾಗೋಡು ಏಕೈಕ ಅಭ್ಯರ್ಥಿ. ಅವರದು ರೈತಪರ ಧ್ವನಿ. ಸ್ಪೀಕರ್ ಆಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸರ್ಕಾರದ ಕಿವಿಹಿಂಡಿ ಜನಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಭೆಯಲ್ಲಿ ಜಿ.ಪಂ. ಸದಸ್ಯೆ ಶ್ವೇತಾ ಬಂಡಿ, ತಾ.ಪಂ. ಅಧ್ಯಕ್ಷ ವಾಸಪ್ಪಗೌಡ, ಉಪಾಧ್ಯಕ್ಷೆ ಸುಮಿತ್ರ ರಾಮಚಂದ್ರ, ಸದಸ್ಯ ಏರಗಿ ಉಮೇಶ, ಚಂದ್ರೇಶ್, ಬಿ.ಜಿ.ಚಂದ್ರಮೌಳಿ, ಪ.ಪಂ. ಸದಸ್ಯ ರತ್ನಾಕರ ಶೆಟ್ಟಿ, ಮಾರಿಯಮ್ಮ, ಮುಖಂಡರಾದ ಡಾಕಪ್ಪ, ಕಾಲಸಸಿ ಸತೀಶ, ಲಕ್ಷ್ಮಣಗೌಡ, ಶ್ರೀನಿವಾಸ ಕಾಮತ್, ಬಿ.ಆರ್.ಪ್ರಭಾಕರ್, ಮಹಾಬಲರಾವ್, ಕುನ್ನೂರು ಮಂಜಪ್ಪ ಮೊದಲಾದವರು ಇದ್ದರು.







