ನೀತಿ ಸಂಹಿತೆ ಉಲ್ಲಂಘನೆ ತಡೆಯಲು ವಿವಿಧ ತಂಡಗಳು: ದ.ಕ. ಡಿಸಿ
ಮಂಗಳೂರು, ಮಾ. 30: ಮಾ.27ರಿಂದ ಜಾರಿಗೊಂಡಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವ ಉದ್ದೇಶದಿಂದ ವಿಧಾನಸಭಾ ಕ್ಷೇಕ್ರವಾರು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆಯು ಮೇ 18ರವರೆಗೆ ದಾರಿಯಲ್ಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ರಾಜಕಿಯೇತರ ಸಾರ್ವಜನಿಕ ಕಾರ್ಯಕ್ರಮ ಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿಯನ್ನು ನೀಡಬೇಕು ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು 50 ಸಾವಿರ ರೂ.ಕ್ಕಿಂತ ಹೆಚ್ಚು ಹಣವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಪೂರಕ ದಾಖಲೆಗಳಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮದ್ಯಪಾನ ಮತ್ತು ಯಾವುದೇ ರೀತಿಯ ಉಡುಗೊರೆ ಸಾಮಗ್ರಿಗಳ ಮೊತ್ತವು 10 ಸಾವಿರ ರೂ.ಗಳಿಗಿಂತ ಹೆಚ್ಚಿಗೆ ಇದ್ದಲ್ಲಿ ವಶಕ್ಕೆ ಪಡೆಯಲಾಗುವುದು. ದಾಖಲೆ ಸಹಿತ 10 ಲಕ್ಷಕ್ಕಿಂತ ಹೆಚ್ಚು ಹಣ ಸಾಗಿಸಿದ್ದಲ್ಲಿ ಪ್ರಕರಣವನ್ನು ಮುಂದಿನ ತನಿಖೆಗೆ ಆದಾಯ ತೆರಿಗೆ ಇಲಾಖೆಯ ಸುಪರ್ದಿಗೆ ನೀಡಲಾಗುವುದು. ಈ ಅವಧಿಯಲ್ಲಿ ಯಾವುದೇ ಅನುಮಾನಾಸ್ಪದ ಹಣ ವಶಪಡಿಸಿಕೊಂಡಲ್ಲಿ ನಿಖರತೆ ಬಗ್ಗೆ ಪರಾಮರ್ಶಿಸಿ, ತುರ್ತಾಗಿ ತೀರ್ಮಾನಿಸಲು ಜಿಲ್ಲಾ ಚುನಾವಣಾ ವೆಚ್ಚ ಮೆಲ್ವಿಚಾರಣಾ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ಅವರನ್ನೊಳಗೊಂಡ ಸಮಿತಿಗೆ ಹಸ್ತಾಂತರಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.







