ಟ್ರಾವೆಲ್ ಏಜೆನ್ಸಿಗಳಿಂದ ವೀಸಾದಲ್ಲಿ ವಂಚನೆ: ಉಡುಪಿ ಎಸ್ಪಿಗೆ ದೂರು

ಉಡುಪಿ, ಮಾ.30: ವಾಯುಯಾನದ ಟಿಕೇಟ್ ನೀಡುವ ಖಾಸಗಿ ಟ್ರಾವೆಲ್ ಎಜೆನ್ಸಿಗಳು ವೀಸಾ ನೀಡುವುದಾಗಿ ಹಣವನ್ನು ಪಡೆದು ವಂಚಿಸುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಉಡುಪಿಯವರೊಬ್ಬರು ದೂರು ನೀಡಿದರು.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ, ಪಾಸ್‌ಪೋಟ್ ಹಾಗೂ ವೀಸಾಗಳಿಗೆ ಯಾರೂ ಮದ್ಯವರ್ತಿಗಳನ್ನು ಹಿಡಿಯ ಬೇಕಾಗಿಲ್ಲ. ವೀಸಾಕ್ಕಾಗಿ ನೇರವಾಗಿ ಸಂಬಂಧಿತ ದೇಶಗಳ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.
ಆದರೆ ಈಗ ಟ್ರಾವೆಲ್ ಎಜೆನ್ಸಿಗಳು ತಾವೇ ವೀಸಾ ಮಾಡಿಸಿಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಡೆದು ವಂಚಿಸುತ್ತಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇಂದು ಒಂದು ಗಂಟೆಯ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 24 ಕರೆಗಳು ಬಂದಿದ್ದು, ಇವುಗಳಲ್ಲಿ ಹೆಚ್ಚಿನವು ವೈಯಕ್ತಿಕ ವಿಷಯಕ್ಕೆ ಸಂಬಂಧ ಪಟ್ಟದ್ದಾಗಿತ್ತು. ಹೆಬ್ರಿಯಲ್ಲಿ ಹೆಚ್ಚುತ್ತಿರುವ ದನಗಳ್ಳತನದ ಕುರಿತು ಒಂದೇ ರೀತಿಯ ಮೂರು ಕರೆಗಳು ಬಂದವು. ಇವುಗಳಿಗೆ ಉತ್ತರಿಸಿದ ಎಸ್ಪಿ ಅವರು, ಹೆಬ್ರಿಯಲ್ಲಿ ಈಗಾಗಲೇ ಎರಡು ಚೆಕ್‌ಪೋಸ್ಟ್‌ಗಳನ್ನು ಅಜೆಕಾರು ಹಾಗೂ ಸೋಮೇಶ್ವರಗಳಲ್ಲಿ ಅಳವಡಿಸಿದ್ದಾಗಿ ತಿಳಿಸಿದರು.
ಆದರೆ ದನಗಳ್ಳರು ಹೆಬ್ರಿ-ಮುದ್ರಾಡಿ ಮಾರ್ಗವಾಗಿ ಸಾಗುತಿದ್ದು, ಇದನ್ನು ನಿಲ್ಲಿಸಲು ಮುದ್ರಾಡಿ ಸಮೀಪ ಚೆಕ್‌ಪೋಸ್ಟ್ ಅಳವಡಿಸುವಂತೆ ಸಲಹೆ ನೀಡಿದರು. ಅಲ್ಲದೇ ದನಗಳ್ಳತನದಲ್ಲಿ ತೊಡಗಿಸಿಕೊಂಡಿರುವ ಕೆಲವರು ಮಾಹಿತಿಗಳನ್ನು ಎಸ್ಪಿ ಅವರಿಗೆ ನೀಡಿದರು. ಈ ಕುರಿತು ತಕ್ಷಣವೇ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಟ್ರಾಫಿಕ್ ಕಾನೂನು ಉಲ್ಲಂಘನೆ ಕುರಿತು ಕೆಲವು ದೂರುಗಳಿದ್ದು, ಅತಿವೇಗದ ಚಾಲನೆ, ಕರ್ಕಶ ಶಬ್ದದೊಂದಿಗೆ ಹೋಗುವ ಮೋಟಾರು ಸೈಕಲ್ ಕುರಿತು ಕೆಲವರು ದೂರು ನೀಡಿದರು. ಕುಂದಾಪುರ, ಗಂಗೊಳ್ಳಿಯಿಂದ ಮಟ್ಕಾದ ದೂರು ಬಂದರೆ, ಸರಕಾರಿ ನೌಕರರೊಬ್ಬರು ಎಲ್‌ಐಸಿ ಏಜೆಂಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಕುಂದಾಪುರದಿಂದ ಒಬ್ಬರು ಕರೆ ಮಾಡಿ ದೂರು ನೀಡಿದರು.
ಉಡುಪಿ ನಗರದ ವೈನ್‌ಶಾಪ್ ಒಂದು ಬೆಳಗ್ಗೆ 6ರಿಂದ ಕಾರ್ಯನಿರ್ವಹಿಸುತಿದ್ದು, ಇದರಿಂದ ಬೆಳಗ್ಗೆ ಕೆಲಸ ಹೋಗುವ ಕೂಲಿಕಾರ್ಮಿಕರು ಮದ್ಯ ಸೇವಿ ಸಿಯೇ ಕೆಲಸಕ್ಕೆ ಹೋಗುತಿದ್ದಾರೆ ಎಂದು ಒಬ್ಬರು ದೂರಿದರು. ಕೊಲ್ಲೂರು ಜಂಕ್ಷನ್, ತ್ರಾಸಿ ಜಂಕ್ಷನ್‌ಗಳ ಟ್ರಾಫಿಕ್ ಸಮಸ್ಯೆ ಬಗ್ಗೆ ಇಂದೂ ಕೂಡಾ ದೂರು ನೀಡಲಾಯಿತು.
ಆನೆಗುಡ್ಡೆ ದೇವಸ್ಥಾನದ ಪ್ರವೇಶಧ್ವಾರದ ಬಳಿ ತಡೆ ಹಾಕಲಾಗಿದ್ದು, ಅಲ್ಲಿ ಸಿಸಿಕೆಮರಾ ಅಳವಡಿಸುವಂತೆ ಕುಂದಾಪುರದಿಂದ ಒಬ್ಬರು ಕರೆ ಮಾಡಿ ಸಲಹೆ ನೀಡಿದರು. ಕಾರ್ಕಳ ಕಸಬಾ ಗ್ರಾಮದಲ್ಲಿ ಗ್ಯಾಸ್ ಎಜೆನ್ಸಿ ಸ್ಥಾಪಿಸಲು ಗ್ರಾಮಸ್ಥರು ವಿರೋಧವಿದ್ದಾರೆ ಎಂದೊಬ್ಬರು ಹೇಳಿದರು.
ಮಾ.2ರಂದು ನಡೆದ ಫೋನ್ ಇನ್ ಕಾರ್ಯಕ್ರಮದ ಬಳಿಕ ಕಳೆದ 28 ದಿನಗಳಲ್ಲಿ ಜಿಲ್ಲೆಯಲ್ಲಿ ಮಟ್ಕಾದ 18 ಕೇಸುಗಳು ದಾಖಲಾಗಿದ್ದು 22 ಮಂದಿಯನ್ನು ಬಂಧಿಸಲಾಗಿದೆ. ಇಸ್ಪೀಟ್, ಜೂಜಿಗೆ ಸಂಬಂಧಿಸಿ 12 ಕೇಸು ದಾಖಲಾಗಿ 79 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಮದ್ಯಕ್ಕೆ ಸಂಬಂಧಿಸಿ ಒಂದು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.
ಅಲ್ಲದೇ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ಬಗ್ಗೆ 1380, ಕುಡಿದು ವಾಹನ ಚಲಾಯಿಸಿದ ಬಗ್ಗೆ 31 ಮಂದಿಯ ಪರವಾನಿಗೆ ರದ್ದಿಗೆ ಶಿಫಾರಸ್ಸು ಮಾಡಲಾಗಿದೆ. ಕರ್ಕಶ ಹಾರ್ನ್‌ನ 135, ವಾಹನ ಚಲಾಯಿಸುತ್ತಾ ಮೊಬೈಲಂನಲ್ಲಿ ಮಾತನಾಡಿದ ಬಗ್ಗೆ 40 ಮಂದಿ ವಿರುದ್ಧ ಕೇಸು ದಾಖಲಾಗಿದೆ ಎಂದವರು ತಿಳಿಸಿದರು.







