ಅಭ್ಯರ್ಥಿಯಾಗಲು ಬಯಸಿದ್ದು ನನ್ನ ತೀರ್ಮಾನವಲ್ಲ, ಹೈಕಮಾಂಡ್ ತೀರ್ಮಾನ: ಮಾಜಿ ಸಚಿವ ವಿ. ಸೋಮ್ಮಣ್ಣ

ಹನೂರು,ಮಾ.30: ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳಿಗೆ ಹನೂರು ಕ್ಷೇತ್ರದ ಬಿಜೆಪಿ ಸಮೀಕ್ಷೆಗಳು ತಲುಪಿದ್ದು, ನಾಯಕರ ಅಣತೆಯಂತೆ ಅಭ್ಯರ್ಥಿಯಾಗಲು ಬಯಸಿದ್ದೇನೆ. ಇದು ನನ್ನ ತೀರ್ಮಾನವಲ್ಲ, ಹೈಕಮಾಂಡ್ ತಿರ್ಮಾನ ಎಂದು ಮಾಜಿ ಸಚಿವ ವಿ. ಸೋಮ್ಮಣ್ಣ ತಿಳಿಸಿದರು
ಶುಕ್ರವಾರ ಬೆಳಿಗ್ಗೆ ಮಾಜಿ ಶಾಸಕಿ ಪರಿಮಳ ನಾಗಪ್ಪರವರ ನಿವಾಸಕ್ಕೆ ಬೇಟಿ ನೀಡಿ ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ತಪ್ಪನ್ನು ಎಸಗದೆ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಹಾಗೂ ಅಮಿತ್ ಶಾ ಅವರ ಮಿಷನ್ 150 ಗುರಿ ತಲುಪುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಹನೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದೇನೆ. ಇದಕ್ಕೆ ಬದಲಾಗಿ ನಾಗಪ್ಪ ಕುಟುಂಬಸ್ಥರು ಸೂಚಿಸಿದವರಿಗೆ ವಿಧಾನ ಪರಿಷತ್ ಸದಸ್ಯತ್ವ ಕೊಡುವುದಾಗಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಮಳಾ ನಾಗಪ್ಪ ಅವರು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅವರಿಗೇ ಟಿಕೆಟ್ ಬೇಕೆಂಬ ಒತ್ತಾಯವಿದ್ದಲ್ಲಿ ಯಡಿಯೂರಪ್ಪ ಅವರ ಬಳಿ ಚರ್ಚಿಸಿ ಎ.2ರ ಬೆಳಿಗ್ಗೆ 10ರ ಒಳಗೆ ನಿಮ್ಮ ನಿರ್ಧಾರ ತಿಳಿಸಿ. ರಾಜ್ಯದ್ಯಾಕ್ಷರು ನಿಮಗೆ ಟಿಕೆಟ್ ನೀಡಿದ್ದೇ ಆದಲ್ಲಿ ನಾನೂ ಹನೂರು ಕ್ಷೇತ್ರಕ್ಕೆ ಆಗಮಿಸಿ ಪಕ್ಷ ಸಂಘಟನೆ ಕೈಗೊಳ್ಳುವೆ. ಟಿಕೆಟ್ ನನಗೆ ಆದರೆ ನಮ್ಮೊಡೆನೆ ಪಕ್ಷ ಸಂಘಟನೆಗೆ ಕೈ ಜೋಡಿಸಿ ಎಂದು ತಿಳಿಸಿದರು.
ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸುದ್ದಿಗೋಷ್ಠಿ: ಮಾಜಿ ಸಚಿವ ಸೋಮಣ್ಣ ಅವರ ಸಭೆಯ ಬಳಿಕ ಅವರ ನಿವಾಸದಲ್ಲಿಯೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು, ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಟಿಕೆಟ್ ಕೈ ತಪ್ಪುವುದಿಲ್ಲ. ಬಿಜೆಪಿ ಟಿಕೆಟ್ ಹಂಚಿಕೆ ಮಾಡುವಾಗ ಅವರ ಇತಿಹಾಸ, ಕ್ಷೇತ್ರಕ್ಕಾಗಿ ಅವರು ಸಲ್ಲಿಸಿರುವ ಸಾಧನೆ, ಅವರ ಅಭಿವೃದ್ಧಿ ಕಾರ್ಯ, ಎಲ್ಲವನ್ನೂ ಪರಿಗಣಿಸಿಯೇ ನೀಡುವುದು. ಈ ಕ್ಷೇತ್ರದಲ್ಲಿ ಸುಧೀರ್ಘ 55 ವರ್ಷಗಳ ರಾಜಕೀಯ ಇತಿಹಾಸ, 40 ಸಾವಿರ ಮತಗಳನ್ನು ಹೊಂದಿರುವ ನಮಗೆ ಟಿಕೆಟ್ ನೀಡದೆ ಇಷ್ಟೆಲ್ಲಾ ಅರ್ಹತೆಯಿರುವ ಸ್ಥಳೀಯರಾದ ನಮ್ಮ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸ್ಪಷ್ಟಪಡಿಸಿದರು.







