ಸೌದಿ: ಮರಳು ಬಿರುಗಾಳಿ ಆರ್ಭಟ; ರಸ್ತೆ, ವಾಯು ಸಾರಿಗೆ ಅಸ್ತವ್ಯಸ್ತ

ರಿಯಾದ್, ಮಾ. 30: ಸೌದಿ ಅರೇಬಿಯದ ಹಲವಾರು ನಗರಗಳಿಗೆ ಗುರುವಾರ ಮರಳು ಬಿರುಗಾಳಿ ಅಪ್ಪಳಿಸಿದೆ ಹಾಗೂ ಇದರ ಪರಿಣಾಮವಾಗಿ ದೇಶಾದ್ಯಂತ ರಸ್ತೆ ಮತ್ತು ವಾಯು ಸಾರಿಗೆ ಅಸ್ತವ್ಯಸ್ತಗೊಂಡಿದೆ.
ದೇಶದ ಹೆಚ್ಚಿನ ಭಾಗಗಳಲ್ಲಿ ವಾರಾಂತ್ಯದಲ್ಲಿ ಅಸ್ಥಿರ ಹವಾಮಾನ ಕಾಡಲಿದೆ ಎಂದು ಸೌದಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಹೊರಡಿಸಿದೆ.
ರಾಜಧಾನಿ ರಿಯಾದ್‌ನಲ್ಲೂ ಮರಳು ಬಿರುಗಾಳಿ ಬೀಸಲಿದೆ ಎಂದು ಅದು ತಿಳಿಸಿದೆ.
ಮರಳು ಮತ್ತು ಕಡಿಮೆ ದೃಗ್ಗೋಚರತೆಯಿಂದಾಗಿ ಸೌದಿ ಅರೇಬಿಯದ ಎರಡನೇ ದೊಡ್ಡ ನಗರ ಜಿದ್ದಾದಲ್ಲಿ ಹಲವಾರು ರಸ್ತೆ ಅಪಘಾತಗಳು ಸಂಭವಿಸಿವೆ.
ಪವಿತ್ರ ನಗರ ಮಕ್ಕಾದಲ್ಲೂ ಮರಳು ಬಿರುಗಾಳಿ ದಾಂಧಲೆಯೆಬ್ಬಿಸಿದೆ.
ಜಿದ್ದಾ ಬಂದರಿನಲ್ಲಿ ಕಡಿಮೆ ದೃಗ್ಗೋಚರತೆಯ ಹಿನ್ನೆಲೆಯಲ್ಲಿ ಸಾಗರ ಸಾರಿಗೆಯನ್ನೂ ಸ್ಥಗಿತಗೊಳಿಸಲಾಯಿತು.
ಆದಾಗ್ಯೂ, ದೊರೆ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದಲ್ಲಿ, ಬಿರುಗಾಳಿಯ ಹೊರತಾಗಿಯೂ ಸುಗಮ ಕಾರ್ಯನಿರ್ವಹಣೆ ನಡೆಯಿತು ಎಂದು ಅಧಿಕಾರಿಗಳು ಘೋಷಿಸಿದರು.
ಇದಕ್ಕೂ ಮೊದಲು, ಸೌದಿ ಅರೇಬಿಯದ ಉತ್ತರದ 6 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.





