‘ರಾಯ್ಟರ್ಸ್’ ವರದಿಗಾರರ ಪರ ವಾದಿಸಲಿದ್ದಾರೆ ಅಮಲ್ ಕ್ಲೂನಿ
ಮ್ಯಾನ್ಮಾರ್ ಸೇನಾ ದೌರ್ಜನ್ಯದ ಬಗ್ಗೆ ವರದಿ ಮಾಡಿದ್ದಕ್ಕೆ ಬಂಧನ

ನ್ಯೂಯಾರ್ಕ್, ಮಾ. 30: ಮ್ಯಾನ್ಮಾರ್‌ನಲ್ಲಿ ಬಂಧನದಲ್ಲಿರುವ ಇಬ್ಬರು ‘ರಾಯ್ಟರ್ಸ್’ ಪತ್ರಕರ್ತರ ಪರವಾಗಿ ವಾದಿಸಲು ಬ್ರಿಟಿಷ್-ಲೆಬನೀಸ್ ಮಾನವಹಕ್ಕುಗಳ ವಕೀಲೆ ಹಾಗೂ ಹಾಲಿವುಡ್ ನಟ ಜಾರ್ಜ್ ಕ್ಲೂನಿ ಪತ್ನಿ ಅಮಲ್ ಕ್ಲೂನಿ ಮುಂದೆ ಬಂದಿದ್ದಾರೆ.
ಮ್ಯಾನ್ಮಾರ್‌ನ ಪತ್ರಕರ್ತರಾದ ವಾ ಲೋನೆ ಮತ್ತು ಕ್ಯಾವ್ ಸೋ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ ಸರಕಾರಿ ರಹಸ್ಯಗಳ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಸಾಬೀತಾದರೆ, ಅವರು 14 ವರ್ಷಗಳವರೆಗೆ ಜೈಲು ಶಿಕ್ಷೆ ಎದುರಿಸುತ್ತಾರೆ.
ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆ ಮತ್ತು ಸೈನಿಕರು ನಡೆಸಿದ ದೌರ್ಜನ್ಯ ಮತ್ತು ಅತ್ಯಾಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಪತ್ರಕರ್ತರನ್ನು ಬಂಧಿಸಲಾಗಿತ್ತು.
‘‘ವಾ ಲೋನೆ ಮತ್ತು ಕ್ಯಾವ್ ಸೋ ಸುದ್ದಿ ಪ್ರಸಾರ ಮಾಡಿದರು ಎಂಬ ಕಾರಣಕ್ಕಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ. ಪ್ರಕರಣದ ಕಡತಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಇಬ್ಬರು ಪತ್ರಕರ್ತರು ಅಮಾಯಕರು ಎನ್ನುವುದು ಸಂಶಯಾತೀತವಾಗಿ ಸ್ಪಷ್ಟವಾಗಿದೆ. ಹಾಗಾಗಿ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು’’ ಎಂದು ಅಮಲ್ ಕ್ಲೂನಿ ಹೇಳಿದ್ದಾರೆ.
‘‘ಇದರ ಹೊರತಾಗಿಯೂ ಅವರಿಗೆ ಜಾಮೀನು ನಿರಾಕರಿಸಲಾಗಿದೆ ಹಾಗೂ ಅವರು 14 ವರ್ಷ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ. ಈ ಪ್ರಕರಣದ ಫಲಿತಾಂಶವು, ಕಾನೂನಿನ ಆಡಳಿತ ಮತ್ತು ವಾಕ್ ಸ್ವಾತಂತ್ರಕ್ಕೆ ಮ್ಯಾನ್ಮಾರ್‌ನ ಬದ್ಧತೆಯೇನು ಎನ್ನುವುದನ್ನು ತಿಳಿಸಲಿದೆ’’ ಎಂದರು.
ಅಮಲ್ ಕ್ಲೂನಿ ಹಾಲಿವುಡ್ ನಟ ಹಾಗೂ ನಿರ್ಮಾಪಕ ಜಾರ್ಜ್ ಕ್ಲೂನಿಯನ್ನು 2014ರಲ್ಲಿ ವಿವಾಹವಾಗಿದ್ದಾರೆ.







