ಹೌದಿ ಬಂಡುಕೋರರಿಂದ ಸೌದಿಯತ್ತ ಮತ್ತೆ ಕ್ಷಿಪಣಿ
ಅರ್ಧದಲ್ಲೇ ತುಂಡರಿಸಿದ ವಾಯು ರಕ್ಷಣಾ ಪಡೆ
.jpg)
ರಿಯಾದ್ (ಸೌದಿ ಅರೇಬಿಯ), ಮಾ. 30: ಇರಾನ್ ಬೆಂಬಲಿತ ಹೌದಿ ಬಂಡುಕೋರರು ಯಮನ್‌ನಿಂದ ಸೌದಿ ಅರೇಬಿಯದ ನಗರ ಜಝನ್‌ನತ್ತ ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಸೌದಿ ಅರೇಬಿಯದ ರಾಯಲ್ ವಾಯು ರಕ್ಷಣಾ ಪಡೆಗಳು ಯಶಸ್ವಿಯಾಗಿ ತುಂಡರಿಸಿವೆ ಎಂದು ಯಮನ್‌ನ ಕಾನೂನುಬದ್ಧ ಸರಕಾರದ ಪರವಾಗಿ ಹೋರಾಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಯ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಹೇಳಿದ್ದಾರೆ.
ಗುರುವಾರ ರಾತ್ರಿ 9:35ರ ಸುಮಾರಿಗೆ ಕ್ಷಿಪಣಿಯನ್ನು ಹೌದಿ ಬಂಡುಕೋರರ ಭದ್ರನೆಲೆ ಸಾಡದಿಂದ ಹಾರಿಸಲಾಯಿತು ಹಾಗೂ ಅದನ್ನು ಉದ್ದೇಶಪೂರ್ವಕವಾಗಿ ದಕ್ಷಿಣದ ನಗರ ಜಝನ್‌ನ ಜನನಿಬಿಡ ಸ್ಥಳಗಳತ್ತ ಗುರಿಯಿರಿಸಲಾಯಿತು ಎಂದು ಹೇಳಿಕೆಯೊಂದರಲ್ಲಿ ಅವರು ತಿಳಿಸಿದರು.
ಇದು ಯಮನ್‌ನ ಹೌದಿ ಬಂಡುಕೋರರಿಗೆ ಇರಾನ್ ನೀಡುತ್ತಿರುವ ಬೆಂಬಲಕ್ಕೆ ಇನ್ನೂ ಒಂದು ಪುರಾವೆಯಾಗಿದೆ ಎಂಬುದಾಗಿ ಅಲ್-ಮಾಲ್ಕಿ ಬಣ್ಣಿಸಿದರು. ಇದು ವಿಶ್ವಸಂಸ್ಥೆಯ ನಿರ್ಣಯಗಳ ಸಂಖ್ಯೆ 2216 ಮತ್ತು 2231ರ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದರು.
ಅದೂ ಅಲ್ಲದೆ, ಕ್ಷಿಪಣಿ ಹಾರಾಟವು ಸೌದಿ ಅರೇಬಿಯ ಹಾಗೂ ಪ್ರಾದೇಶಿಕ ಮತ್ತು ಭದ್ರತೆಯನ್ನು ಬೆದರಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದರು.
ಗ್ರಾಮಗಳು, ನಗರಗಳು ಜನಭರಿತ ಪ್ರದೇಶಗಳತ್ತ ಪ್ರಕ್ಷೇಪಕ ಕ್ಷಿಪಣಿಗಳನ್ನು ಹಾರಿಸುವುದನ್ನು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.







