ದಾಖಲೆ ರಹಿತ ಹಣ, ಉಡುಗೊರೆ ಸಾಗಾಟ ನೀತಿ ಸಂಹಿತೆ ಉಲ್ಲಂಘನೆ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಮಾ.31: ಭಾರತ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಮಾ.27ರಂದು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಅಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರವಾರು ವಿವಿಧ ತಂಡಗಳನ್ನು ರಚಿಸಲಾಗಿದೆ. ಚುನಾವಣೆಯ ಮಾದರಿ ನೀತಿ ಸಂಹಿತೆ ಮೇ 18ರವರೆಗೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ರಾಜಕೀಯೇತರ ಸಾರ್ವಜನಿಕ ಕಾರ್ಯಕ್ರಮ ಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾ ಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು 50,000ರೂ.ಗಿಂತ ಹೆಚ್ಚು ಮೊಬಲಗನ್ನು ಒಯ್ಯುವ ಸಂದರ್ಭದಲ್ಲಿ ಪೂರಕ ದಾಖಲೆಗಳಿರುವುದನ್ನು ಖಚಿತಪಡಿಸಿ ಕೊಳ್ಳಬೇಕು. ಅಲ್ಲದೇ ಮದ್ಯಪಾನ ಮತ್ತು ಯಾವುದೇ ರೀತಿಯ ಉಡುಗೊರೆ ಸಾಮಾಗ್ರಿಗಳ ಮೊತ್ತ 10,000ರೂ.ಗಳಿಗಿಂತ ಹೆಚ್ಚಿಗೆ ಇದ್ದಲ್ಲಿ ವಶಕ್ಕೆ ಪಡೆಯಲಾ ಗುವುದು ಹಾಗೂ ದಾಖಲೆ ಸಹಿತ 10 ಲಕ್ಷ ರೂ.ಗಿಂತ ಹೆಚ್ಚು ಮೊಬಲಗನ್ನು ಸಾಗಿಸುತಿದ್ದಲ್ಲಿ, ಪ್ರಕರಣವನ್ನು ಮುಂದಿನ ತನಿಖೆಗೆ ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ನೀಡಲಾಗುವುದು.
ಈ ಅವಧಿಯಲ್ಲಿ ಯಾವುದೇ ಅನುಮಾನಸ್ಪದ ಹಣವನ್ನು ವಶಪಡಿಸಿ ಕೊಂಡಿದ್ದಲ್ಲಿ, ನಿಖರತೆ ಬಗ್ಗೆ ಪರಾಮರ್ಶಿಸಿ ತುರ್ತಾಗಿ ತೀರ್ಮಾನಿಸಲು ಜಿಲ್ಲಾ ಚುನಾವಣಾ ವೆಚ್ಚ ಮೇಲ್ವಿಚಾರಣ ಸಮಿತಿ, ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಇವರನ್ನೊಳಗೊಂಡ ಸಮಿತಿಗೆ ಹಸ್ತಾಂತರಿಸ ಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.







