ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ದೂರು ದಾಖಲಿಸಿದ ಬಿಜೆಪಿ

ಗೋರಖ್‌ಪುರ, ಮಾ.31: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಶಲಬ್ ಮಣಿ ತ್ರಿಪಾಠಿ ಶುಕ್ರವಾರದಂದು ಮಾನಹಾನಿ ದೂರು ದಾಖಲಿಸಿದ್ದಾರೆ. ದಿಯೊರಿಯ ಜಿಲ್ಲೆಯ ಫಾಸ್ಟ್ ಟ್ರಾಕ್ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500ರಡಿ (ಮಾನಹಾನಿ) ದೂರನ್ನು ದಾಖಲಿಸಲಾಗಿದೆ. ಈ ದೂರಿನ ವಿಚಾರಣೆಯನ್ನು ಎಪ್ರಿಲ್ ಐದರಂದು ನಡೆಸಲಾಗುವುದು ಎಂದು ತ್ರಿಪಾಠಿ ಪರ ವಕೀಲರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಪ್ರಧಾನಿ ಮೋದಿ, ಆರೋಪಿತ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಮಧ್ಯೆ ಹೋಲಿಕೆ ಮಾಡಿದ್ದರು ಎಂದು ತ್ರಿಪಾಠಿ ಆರೋಪಿಸಿದ್ದಾರೆ. ಮೋದಿ ಎಂಬ ಹೆಸರು ಭ್ರಷ್ಟಾಚಾರಕ್ಕೆ ಪರ್ಯಾಯವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದರು. ಇದು ಬಿಜೆಪಿ ಕಾರ್ಯಕರ್ತರ ಮತ್ತು ದೇಶದ ಜನರ ಭಾವನೆಗೆ ಧಕ್ಕೆಯುಂಟು ಮಾಡಿದೆ. ಹಾಗಾಗಿ ನಾನು ಮಾನಹಾನಿ ದೂರು ದಾಖಲಿಸಿದ್ದೇನೆ ಎಂದು ಬಿಜೆಪಿ ವಕ್ತಾರರಾದ ತ್ರಿಪಾಠಿ ತಿಳಿಸಿದ್ದಾರೆ. ಆರೋಪದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್, ಪಕ್ಷವು ಮುಂದೆಯೂ ಸರಕಾರದ ನೀತಿಗಳು ಮತ್ತು ಅದರ ವೈಫಲ್ಯಗಳ ವಿರುದ್ಧ ಧ್ವನಿಯೆತ್ತಲಿದೆ. ಆಮೂಲಕ ಭ್ರಷ್ಟಾಚಾರಕ್ಕೆ ತಡೆಯೊಡ್ಡಲು ಪ್ರಯತ್ನಿಸಲಿದೆ ಎಂದು ತಿಳಿಸಿದೆ.







