ಕಾವೇರಿ ವಿವಾದ: ಕಾಲಾವಕಾಶಕ್ಕಾಗಿ ಸುಪ್ರೀಂ ಅನ್ನು ಕೋರಿದ ಕೇಂದ್ರ

ಹೊಸದಿಲ್ಲಿ,ಮಾ.31: ಕೇಂದ್ರವು ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆಯು ನಡೆಯಲಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಮೂರು ತಿಂಗಳು ಕಾಲಾವಕಾಶವನ್ನು ಕೋರಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಅರ್ಜಿಯಲ್ಲಿ ಅದು ಕಾವೇರಿ ನಿರ್ವಹಣೆ ಮಂಡಳಿಯ ರಚನೆ ಕುರಿತು ಸ್ವಷ್ಟನೆಯನ್ನೂ ಕೋರಿದೆ.
ಕಾವೇರಿಯು ಭಾವನಾತ್ಮಕ ವಿಷಯವಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಕ್ಷಣವೇ ಜಾರಿಗೊಳಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ ಎಂದೂ ಕೇಂದ್ರವು ತನ್ನ ಅರ್ಜಿಯಲ್ಲಿ ನಿವೇದಿಸಿಕೊಂಡಿದೆ.
ಇತ್ತ ಕಾವೇರಿ ನಿರ್ವಹಣೆ ಮಂಡಳಿಯ ರಚನೆಗಾಗಿ ಕೇಂದ್ರದ ಮೇಲೆ ಒತ್ತಡವನ್ನು ಹೆಚ್ಚಿಸುವ ಪ್ರಯತ್ನವಾಗಿ ಎ.2ರಂದು ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ರಾಜ್ಯಾದ್ಯಂತ ಉಪವಾಸ ಮುಷ್ಕರವನ್ನು ನಡೆಸುವುದಾಗಿ ತಮಿಳುನಾಡಿನ ಆಡಳಿತ ಎಐಎಡಿಎಂಕೆಯು ಪ್ರಕಟಿಸಿದೆ.
ಕಾವೇರಿ ನದಿ ನೀರಿನ ಹಂಚಿಕೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅವಿಧೇಯವಾಗಿರುವುದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸುವಂತೆ ಕೋರಿ ತಮಿಳುನಾಡು ಸರಕಾರವು ಸುಪ್ರೀಂ ಮೆಟ್ಟಿಲನ್ನೇರಿದೆ. ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸುವ ಬದಲು ಕೇಂದ್ರವು ಸಂಬಂಧಿತ ರಾಜ್ಯಗಳ ಸಭೆಯನ್ನು ಕರೆಯುವ ಮೂಲಕ ಅದನ್ನು ವಿಳಂಬಿಸಿದೆ ಎಂದು ಅದು ಆರೋಪಿಸಿದೆ. ತನ್ನ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ರಾಜ್ಯ ಸರಕಾರವು ಸೋಮವಾರ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿಕೊಳ್ಳಲಿದೆ.
ಕಾವೇರಿ ನಿರ್ವಹಣೆ ಮಂಡಳಿ ರಚನೆಗೆ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ಆರು ವಾರಗಳ ಗಡುವು ಈಗಾಗಲೇ ಅಂತ್ಯಗೊಂಡಿದೆ ಮತ್ತು ಕಾವೇರಿ ವಿವಾದ ಕುರಿತು ಕೇಂದ್ರದ ಉತ್ತರದ ನಿರೀಕ್ಷೆಯಲ್ಲಿ ರೈತರಿದ್ದಾರೆ ಎಂದೂ ತಮಿಳುನಾಡು ಬೆಟ್ಟು ಮಾಡಿದೆ.







