ಕಾರ್ಕಳ: ಎ.3ರಂದು ಕನ್ನಡದ ಕಲರವ
ಕಾರ್ಕಳ, ಮಾ.31: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕಾರ್ಕಳ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು, ಶಿಕ್ಷಕ ರಕ್ಷಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಲರವ ಹೆಸರಿನ ವಿನೂತನ ಕಾರ್ಯಕ್ರಮವೊಂದು ಎ.3ರಂದು ಸಂಜೆ 5ಗಂಟೆಗೆ ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಗಳ ಬುಲು ರಂಗಮಂದಿರದಲ್ಲಿ ನಡೆಯಲಿದೆ.
ಕಲರವವನ್ನು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಉದ್ಘಾಟಿಸಲಿರುವರು. ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತಿನ ಮಂಟಪ ಕಟ್ಟಲಿದ್ದಾರೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಮಿಂಚಿದ ವಿವಿಧ ಚಾನೆಲ್‌ಗಳಲ್ಲಿ ಕಾರ್ಯಕ್ರಮ ನೀಡಿದ, ಬಹುಮಾನ ಪಡೆದ ಮಕ್ಕಳ ತಂಡ ವೈವಿಧ್ಯಮಯ ಕಾರ್ಯಕ್ರಮ ನೀಡಲಿದೆ ಎಂದು ಕಲರವದ ರೂವಾರಿ ಶೇಖರ ಅಜೆಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





