ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿ

ಲಕ್ನೊ, ಮಾ. 31: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಎರಡು ಪ್ರತಿಮೆಗಳಿಗೆ ಉತ್ತರಪ್ರದೇಶದಲ್ಲಿ ಶುಕ್ರವಾರ ಹಾಗೂ ಶನಿವಾರ ಹಾನಿ ಎಸಗಲಾಗಿದೆ. ಅಲಹಾಬಾದ್‌ನ ತ್ರಿವೇಣಿಪುರ್‌ದ ಝಾನ್ಸಿಯ ಪಾರ್ಕೊಂದರಲ್ಲಿದ್ದ ಅಂಬೇಡ್ಕರ್ ಪ್ರತಿಮೆ ತಲೆಯನ್ನು ಶನಿವಾರ ಕತ್ತರಿಸಿದ್ದರೆ, ಸಿದ್ಧಾರ್ಥ್‌ನಗರದ ಗೊಹಾನಿಯಾದಲ್ಲಿದ್ದ ಅಂಬೇಡ್ಕರ್ ಪ್ರತಿಮೆಯ ಕೈಗೆ ಶುಕ್ರವಾರ ರಾತ್ರಿ ಹಾನಿ ಮಾಡಲಾಗಿದೆ. ಅಂಬೇಡ್ಕರ್ ವಿಗ್ರಹದ ಕೈಗೆ ಹಾನಿ ಎಸಗಿರುವ ಹಿನ್ನೆಲೆಯಲ್ಲಿ ಗೋಹಾನಿಯಾ ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಮೆಗೆ ಹಾನಿ ಉಂಟು ಮಾಡಿದ ಸ್ಥಳದಲ್ಲಿ ಸೇರಿದ ಪ್ರತಿಭಟನಕಾರರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
‘‘ಈ ವಿಚಾರದಿಂದ ನಾವು ಎಚ್ಚೆತ್ತುಕೊಂಡಿದ್ದೇವೆ. ಶಂಕಿತರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ.’’ ಎಂದು ಅಲಹಾಬಾದ್‌ನ ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿರುವ ಅವರು, ಘಟನೆ ಹಿನ್ನೆಲೆಯಲ್ಲಿ ಈ ಎರಡು ಸ್ಥಳಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ನಿರಾಕರಿಸಿದ್ದಾರೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಡಾ. ಧರ್ಮವೀರ್ ತಿಳಿಸಿದ್ದಾರೆ. ಘಟನೆ ನಡೆದ ಗೋಹಾನಿಯಕ್ಕೆ ದೊಮರಿಯಾ ಗಂಜ್‌ನ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಧಾವಿಸಿದ್ದು, ಇದು ಎಸ್‌ಪಿ ಹಾಗೂ ಬಿಎಸ್‌ಪಿ ಸಂಚು ಎಂದು ಆರೋಪಿಸಿದ್ದಾರೆ. ಈ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಮೂರನೇ ಪ್ರಕರಣ ಇದಾಗಿದೆ. ಮಾರ್ಚ್ 7ರಂದು ಇದೇ ರೀತಿಯ ಪ್ರಕರಣ ಸಂಭವಿಸಿತ್ತು.







