2015-16ರಲ್ಲಿ ಭಾರತದಲ್ಲಿ ಉದ್ಯೋಗ ದರ ಶೇ. 0.1 ಕುಸಿತ

ಹೊಸದಿಲ್ಲಿ, ಮಾ.31: 2014-15ರ ವಿತ್ತೀಯ ವರ್ಷದಲ್ಲಿ ಭಾರತದಲ್ಲಿ ಉದ್ಯೋಗ ದರವು ಶೇ. 0.2 ಕುಸಿತ ಕಂಡಿದ್ದರೆ 2015-16ರ ಸಾಲಿನಲ್ಲಿ ಮತ್ತೆ ಶೇ. 0.1 ಇಳಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಬೆಂಬಲಿತ ಸಂಶೋಧನಾ ಯೋಜನೆ ಕೆಎಲ್‌ಇಎಂಎಸ್ ಇಂಡಿಯ ಡೇಟಾಬೇಸ್‌ನ ವರದಿಯು ತಿಳಿಸಿದೆ.
ವಿಶ್ವ ಕೆಎಲ್‌ಇಎಂಎಸ್ ಅಭಿಯಾನದ ಭಾಗವಾಗಿರುವ ಈ ವರದಿಯು ಭಾರತದ ಆರ್ಥಿಕತೆಯ ಬೆಳವಣಿಗೆ ಮತ್ತು ಉತ್ಪಾದನಾ ವಿನ್ಯಾಸವನ್ನು ವಿಶ್ಲೇಷಿಸುತ್ತದೆ. ವರದಿಯ ಪ್ರಕಾರ, ಕಳೆದ ಎರಡು ವಿತ್ತೀಯ ವರ್ಷಗಳಲ್ಲಿ ಕೃಷಿ, ಅರಣ್ಯ, ಮೀನುಗಾರಿಕೆ, ಗಣಿ, ಆಹಾರ ಉತ್ಪನ್ನ ತಯಾರಿಕೆ, ಜವಳಿ, ಚರ್ಮದ ಉತ್ಪನ್ನಗಳು, ಕಾಗದ, ಸಾರಿಗೆ ಸಾಧನಗಳು ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶವು ಗಣನೀಯವಾಗಿ ಕುಂಠಿತವಾಗಿದೆ. 2014-15ರಲ್ಲಿ ಶೇ. 7.4 ಮತ್ತು 2015-16ರಲ್ಲಿ ಶೇ. 8.2 ಜಿಡಿಪಿ ಏರಿಕೆ ಕಂಡರೂ ಅದು ಉದ್ಯೋಗ ನಾಶಕವಾಗಿ ಪರಿಣಮಿಸಿದೆ.
2015-16ರ ಹಿಂದಿನ ಹತ್ತು ವರ್ಷಗಳಲ್ಲಿ ಸಂಯೋಜಿತ ವಾರ್ಷಿಕ ಉದ್ಯೋಗ ಬೆಳವಣಿಗೆ ದರವು ಕೇವಲ ಶೇ. 0.53 ಆಗಿದೆ ಎಂದು ವರದಿ ತಿಳಿಸಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಕುಂಠಿತವಾಗುವುದು ಹೊಸ ಬೆಳವಣಿಗೆಯಲ್ಲ. ಹಲವು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿದ್ದವರು ಇತರ ಕೆಲಸಗಳನ್ನು ಅರಸಿ ಹೋಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ಕಡಿಮೆ ಆದಾಯದ ಕ್ಷೇತ್ರದಿಂದ ಹೆಚ್ಚಿನ ಆದಾಯ ಕ್ಷೇತ್ರಕ್ಕೆ ಹೋಗುವ ಬದಲಾಗಿ ಕೃಷಿಕರು ಇತರ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದೇ ಕಷ್ಟವಾಗಿದೆ. ಶೇ. 70 ಕೃಷಿಕರು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸುತ್ತದೆ. ಹಾಗೆ ಉದ್ಯೋಗ ಬಸಲಾಯಿಸಿದ ಕೃಷಿಕರು ರಸ್ತೆ ನಿರ್ಮಾಣ ಮತ್ತು ಇತರ ಸಾರ್ವಜನಿಕ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ಪಡೆದುಕೊಳ್ಳುತ್ತಾರೆ. ಆದರೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ 2006-07ರಿಂದ ಉತ್ಪಾದನೆ ಕುಂಠಿತವಾಗುತ್ತಾ ಸಾಗಿದೆ. ಕೃಷಿ ಕ್ಷೇತ್ರದ ಜನರು ಅದಕ್ಕಿಂತಲೂ ಕಡಿಮೆ ಆದಾಯ ತರುವ ಕ್ಷೇತ್ರಗಳಲ್ಲಿ ದುಡಿಯುವಂತಾಗಿದೆ ಎಂದು ವರದಿ ತಿಳಿಸಿದೆ. ನೋಟು ಅಮಾನ್ಯ ಮತ್ತು ಸರಕು ಮತ್ತು ಸೇವಾ ತೆರಿಗೆಯ ಜಾರಿಯಿಂದ ಅನೌಪಚಾರಿಕ ಕ್ಷೇತ್ರಗಳು ತೀವ್ರ ಭಾದಿಸಲ್ಪಟ್ಟಿದ್ದು 2016-17 ಮತ್ತು 2017-18ರ ವಿತ್ತೀಯ ವರ್ಷದಲ್ಲಿ ಉದ್ಯೋಗ ದರವು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ. ಫೆಬ್ರವರಿಯ ತ್ರೈಮಾಸಿಕ ಉದ್ಯೋಗ ಸ್ಥಿತಿಯ ಕುರಿತು ಕಾರ್ಮಿಕ ಮಂಡಳಿ ನೀಡಿರುವ ವರದಿಯ ಪ್ರಕಾರ, 2016ರಲ್ಲಿ ಭಾರತದ ಉತ್ಪಾದನಾ ರಂಗವು 12,000 ಉದ್ಯೋಗಗಳನ್ನು ಕಳೆದುಕೊಂಡಿದೆ. 2017ರ ಎಪ್ರಿಲ್ ಮತ್ತು ಜೂನ್ ವೇಳೆಗೆ ಈ ಪ್ರಮಾಣ 87,000ಕ್ಕೆ ಏರಿಕೆಯಾಗಿದೆ. ಶಿಕ್ಷಣ, ಆರೋಗ್ಯ, ನಿರ್ಮಾಣ, ವ್ಯಾಪಾರ, ರೆಸ್ಟೊರೆಂಟ್, ಮಾಹಿತಿ ತಂತ್ರಜ್ಞಾನ, ಉತ್ಪಾದನೆ ಮತ್ತು ಸಾರಿಗೆ ಮುಂತಾದ ಎಂಟು ಕ್ಷೇತ್ರಗಳಲ್ಲಿ ಕಳೆದ ಮೂರು ತ್ರೈಮಾಸಿಕದಲ್ಲಿ ಅತ್ಯಂತ ನಿಧಾನವಾಗಿ ಉದ್ಯೋಗ ಸೃಷ್ಟಿಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕೇವಲ 67,000 ಉದ್ಯೋಗಗಳನ್ನಷ್ಟೇ ಸೃಷ್ಟಿಸಲು ಸಾಧ್ಯವಾಗಿದೆ ಎಂದು ವರದಿಯು ತಿಳಿಸಿದೆ.







