ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಮಾಹಿತಿ ನೀಡಿದ ವ್ಯಕ್ತಿ ಯಾರು ಗೊತ್ತಾ ?

ಹೊಸದಿಲ್ಲಿ, ಮಾ.31: ಸಿಬಿಎಸ್‌ಇ 10ನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಸಿಬಿಎಸ್‌ಇ ಅಧ್ಯಕ್ಷರಿಗೆ ಪ್ರಥಮವಾಗಿ ಮಾಹಿತಿ ನೀಡಿದ್ದು ದಿಲ್ಲಿಯ ಶಾಲೆಯೊಂದರ ಸಿಬಿಎಸ್‌ಇ 10ನೇ ತರಗತಿಯ ವಿದ್ಯಾರ್ಥಿ ಎಂದು ಮೂಲಗಳು ತಿಳಿಸಿವೆ.
ದೇಶದಾದ್ಯಂತ ಸಿಬಿಎಸ್‌ಇ 10ನೇ ತರಗತಿ ಗಣಿತ ಪರೀಕ್ಷೆ ಮಾರ್ಚ್ 28ರಂದು ಆರಂಭವಾಗಬೇಕಿತ್ತು. ಆದರೆ ಬೆಳಿಗ್ಗೆ ಸುಮಾರು 1:39ರ ವೇಳೆ ಸಿಬಿಎಸ್‌ಇ ಅಧ್ಯಕ್ಷೆ ಅನಿತಾ ಕರ್ವಾಲ್ ಅವರ ಅಧಿಕೃತ ಇ-ಮೇಲ್‌ಗೆ ಬಂದ ಸಂದೇಶವೊಂದು ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಾಟ್ಸಾಪ್‌ನಲ್ಲಿ ಬಹಿರಂಗಗೊಂಡಿದೆ ಎಂದು ತಿಳಿಸಿತ್ತು. ತನ್ನ ತಂದೆಯ ಜಿ-ಮೇಲ್ ಮೂಲಕ ಸಂದೇಶ ಕಳುಹಿಸಿದ್ದ ಮಾಹಿತಿದಾರ ಪರೀಕ್ಷೆಯನ್ನು ರದ್ದುಗೊಳಿಸಲು ಕೋರಿದ್ದ. ಪರೀಕ್ಷೆ ಪೂರ್ವನಿಗದಿತ ಸಮಯದಲ್ಲೇ ನಡೆದರೂ, ಸಿಬಿಎಸ್‌ಇ ಅದೇ ದಿನ ಪೊಲೀಸರಿಗೆ ದೂರು ನೀಡಿತ್ತು ಹಾಗೂ ತನಗೆ ಬಂದಿದ್ದ ಸಂದೇಶವನ್ನು ಪೊಲೀಸರಿಗೆ ಫಾರ್ವರ್ಡ್ ಮಾಡಿತ್ತು. ಅದರ ಆಧಾರದಲ್ಲಿ ರಾತ್ರಿ 8:00 ಗಂಟೆಗೆ ಕ್ರೈಂಬ್ರಾಂಚ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡರು.
ಬಳಿಕ ವಿಶೇಷ ತನಿಖಾ ತಂಡ ಮಾಹಿತಿದಾರನ ಗುರುತುಪತ್ತೆಗೆ ಗೂಗಲ್‌ನ ಮೊರೆಹೊಕ್ಕರು. ಇದರಂತೆ ಸಂದೇಶ ಕಳಹಿಸಲಾಗಿರುವ ಇ-ಮೇಲ್‌ನ ಮಾಹಿತಿಯ ಆಧಾರದಲ್ಲಿ ವ್ಯಕ್ತಿ ಹಾಗೂ ಆತನ ಪುತ್ರನನ್ನು ಪತ್ತೆಹಚ್ಚಲಾಗಿತ್ತು. ದಿಲ್ಲಿಯ ಕ್ಲಬ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ, ಇ-ಮೇಲ್ ಕಳುಹಿಸಿರುವುದು ತನ್ನ ಮಗ ಎಂದು ದೃಢಪಡಿಸಿದ್ದಾರೆ. ಮಗನ ವಾಟ್ಸಾಪ್ ಗೆ ಆತನ ಮಿತ್ರ ಗಣಿತ ಪ್ರಶ್ನೆಪತ್ರಿಕೆಯ ಪ್ರತಿಯನ್ನು ಕಳಿಸಿದ್ದಾನೆ. ಇದರಿಂದ ಆತಂಕಗೊಂಡ ಮಗ ತಕ್ಷಣ ಇದನ್ನು ಸಿಬಿಎಸ್‌ಇ ಗಮನಕ್ಕೆ ತಂದು ಪರೀಕ್ಷೆ ರದ್ದುಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದಾಗ ತಾನು ಸಮ್ಮತಿಸಿದೆ ಎಂದು ಆ ವ್ಯಕ್ತಿ ತಿಳಿಸಿದ್ದಾರೆ. ತಾವು ಪೊಲೀಸರಿಗೆ ಸಹಕಾರ ನೀಡಲು ಸಿದ್ಧ. ಆದರೆ ತಮ್ಮನ್ನು ಇದುವರೆಗೂ ಯಾರೂ ಸಂಪರ್ಕಿಸಿಲ್ಲ. ತನ್ನ ಫೋನಿನ ಮೂಲಕ ಮಗ ಇ-ಮೇಲ್ ಸಂದೇಶ ಕಳಿಸಿರುವ ಕಾರಣ ಮೊಬೈಲ್ ನಂಬರ್ ಅನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಆ ವ್ಯಕ್ತಿ ತಿಳಿಸಿದ್ದಾರೆ. ಇ-ಮೇಲ್ ಸಂದೇಶದ ಜೊತೆ ಪ್ರಶ್ನೆಪತ್ರಿಕೆಯ ಪ್ರತಿಯನ್ನೂ ಲಗತ್ತಿಸಲಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಸಿಬಿಎಸ್‌ಇ ಅಧ್ಯಕ್ಷೆ ಅನಿತಾ ಕರ್ವಾಲ್ ತಿಳಿಸಿದ್ದಾರೆ.
ಸಿಬಿಎಸ್‌ಇ ಅಧಿಕೃತ ಇ-ಮೇಲ್‌ಗೆ ಬೆಳಿಗ್ಗೆ 1:39ಕ್ಕೆ ಸಂದೇಶ ಬಂದಿದ್ದರೂ ಅದನ್ನು ಬೆಳಿಗ್ಗೆ 8:55ರ ವೇಳೆಗೆ ಗಮನಿಸಲಾಗಿದೆ. ತಕ್ಷಣ ಪರೀಕ್ಷಾ ನಿಯಂತ್ರಕರಿಗೆ ಅದನ್ನು ಕಳಿಸಲಾಗಿದೆ. ಆದರೆ 9:30ಕ್ಕೆ ಪರೀಕ್ಷೆ ಆರಂಭವಾಗಲಿದ್ದು ನಿಯಮದ ಪ್ರಕಾರ ಪರೀಕ್ಷೆ ಆರಂಭವಾಗುವವರೆಗೆ ಪ್ರಶ್ನೆಪತ್ರಿಕೆ ಬಂಡಲ್ ತೆರೆಯುವಂತಿಲ್ಲ. ಆದ್ದರಿಂದ ಇ-ಮೇಲ್‌ನಲ್ಲಿದ್ದ ಪ್ರಶ್ನೆಪತ್ರಿಕೆ ಹಾಗೂ ಪರೀಕ್ಷೆಗೆ ನೀಡಲಾಗಿದ್ದ ಪ್ರಶ್ನೆಪತ್ರಿಕೆಯನ್ನು ಹೋಲಿಸಿ ನೋಡುವ ಪ್ರಕ್ರಿಯೆ ನಡೆಯುವಷ್ಟರಲ್ಲಿ ಪರೀಕ್ಷೆ ಆರಂಭವಾಗಿದೆ. ತಕ್ಷಣ ಪರೀಕ್ಷೆಯನ್ನು ರದ್ದು ಮಾಡಲು ಆಗಲಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ವಿಭಾಗದ ಕಾರ್ಯದರ್ಶಿ ಅನಿಲ್ ಸ್ವರೂಪ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ ಸುಮಾರು 34 ವ್ಯಕ್ತಿಗಳ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರನ್ನು ಭೇಟಿ ಮಾಡಿ ಪ್ರಶ್ನೆಪತ್ರಿಕೆ ತಯಾರಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಡಿಸಿಪಿ ದರ್ಜೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತನಿಖಾ ತಂಡ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಇದುವರೆಗೆ ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.







