ಶ್ರೀನಿವಾಸ ಪ್ರಸಾದ್ ದಲಿತರ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ಮಾಡುತ್ತಿದ್ದಾರೆ: ಸಂಸದ ಧ್ರುವನಾರಾಯಣ ಆರೋಪ
ಮೈಸೂರು,ಮಾ.31: ಬಿಜೆಪಿ ದಲಿತರ ಸಂವಾದದಲ್ಲಿ ನಡೆದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ, ಚೋರನಹಳ್ಳಿ ಶಿವಣ್ಣ ದಲಿತ ಸಂಘಟನೆಯಿಂದ ಬಂದವರು. ಸಿಎಂ ಸಿದ್ದರಾಮಯ್ಯ ಅವರ ಚೇಲ ಎಂಬ ಶ್ರೀನಿವಾಸಪ್ರಸಾದ್ ಹೇಳಿಕೆ ಶುದ್ಧ ಸುಳ್ಳು, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ದಲಿತರ ಹಕ್ಕನ್ನು ನೇರವಾಗಿ ಕಸಿದುಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಆರ್.ಧ್ರುವನಾರಾಯಣ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬಿಜೆಪಿಯವರು ಏರ್ಪಡಿಸಿದ್ದ ದಲಿತರ ಸಂವಾದದಲ್ಲಿ ನಡೆದ ಗಲಾಟೆಗೂ ನಮಗೂ ಸಂಬಂಧವಿಲ್ಲ, ಚೋರನಹಳ್ಳಿ ಶಿವಣ್ಣ ದಲಿತ ಸಂಘಟನೆಯಿಂದ ಬಂದವರು. ಅವರು ದಲಿತರಿಗಾದ ನೋವನ್ನು ಪ್ರಶ್ನಿಸಿದ್ದಾರೆ. ನಾವು ಸಹ ವರುಣಾ ಕ್ಷೇತ್ರದಲ್ಲಿ ಅಂಭೇಡ್ಕರ್ ಭವನ ಉದ್ಘಾಟನೆಗೆ ತೆರಳಿದ್ದ ವೇಳೆ ಅಂಭೇಡ್ಕರ್ ಭವನ ಉದ್ಘಾಟನೆ ಮಾಡಬೇಡಿ ಎಂದು ನಮ್ಮ ವಿರುದ್ಧವೂ ಪ್ರತಿಭಟನೆ ಮಾಡಿದ್ದರು. ಹಾಗಂತ ನಾವೂ ಬೇರೆಯವರ ಮೇಲೆ ಆರೋಪ ಮಾಡಿದ್ದೆವಾ? ಎಂದು ಪ್ರಶ್ನಿಸಿದರು.
ದಲಿತರ ಮನಸ್ಸಿಗೆ ನೋವಾದಾಗ ದಲಿತ ಸಂಘಟನೆಗಳು ಪ್ರಶ್ನೆ ಮಾಡುವುದು ಸಹಜ. ಹಾಗಾಗಿ ಅವರು ಇಲ್ಲಿ ಪ್ರಶಿಸಿದ್ದಾರೆ. ಆದರೆ ವಿ.ಶ್ರೀನಿವಾಸಪ್ರಸಾದ್ ಅವರು ಹತಾಶರಾಗಿ ಇಂತಹ ಹೇಳಿಕೆ ನೀಡಿದ್ದಾರೆ. ಒಂದು ಹಂತದಲ್ಲಿ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.





