ಮಂಡ್ಯ : ಅಮಿತ್ ಶಾಗೆ ಕಪ್ಪುಪಟ್ಟಿ ಪ್ರದರ್ಶನ
ಮಂಡ್ಯ, ಮಾ.31: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶನಿವಾರ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಸಂದರ್ಭ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಭಾರತ ಸಂವಿಧಾನ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ರಾಜ್ಯಾಧ್ಯಕ್ಷ ಪೂರ್ಣಚಂದ್ರ ಮತ್ತು ಕುಮಾರ್ ನೇತೃತ್ವದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿದರು.
ರೈತರು, ದಲಿತರ, ಅಲ್ಪಸಂಖ್ಯಾತರ ಮತ್ತು ಬಡವರ ಕೂಗಿಗೆ, ನೋವಿಗೆ ಕಿವಿಗೊಡದ ಕೇಂದ್ರದ ಬಿಜೆಪಿ ಸರಕಾರ ಕಾಲಹರಣ ಮಾಡುತ್ತಿದೆ. ಬಿಜೆಪಿ ಸರಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಕಡೆಗಣಿಸಿದೆ ಎಂದು ಅವರು ಆರೋಪಿಸಿದರು.
ಇದಕ್ಕೂ ಮೊದಲು ಶ್ರೀರಂಗಪಟ್ಟಣ ತಾಲೂಕು ಚಿನ್ನೇನಹಳ್ಳಿಯ ಆತ್ಮಹತ್ಯೆ ಮಾಡಿಕೊಂಡ ರೈತ ರಾಜೆಂದ್ರಪ್ಪ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಅಮಿತ್ ಶಾ, ನಂತರ, ಮೇಲುಕೋಟೆಗೆ ತೆರಳಿ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ನಂತರ, ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸಾವಯವ ಕೃಷಿಕರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತದನಂತರ ನಗರದ ಹೊರವಲಯದ ಕಲ್ಯಾಣಮಂಟಪವೊಂದರಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಸಿದರು.







