ಎ.1: ಬೆಂಗಳೂರು ಬಂಟರ ಸಂಘದಲ್ಲಿ 'ಕರ್ನೂರು ಸ್ಮೃತಿ ಪರ್ವ-2018'
ಸಂಸ್ಮರಣೆ-ತಾಳಮದ್ದಳೆ- ಯಕ್ಷ -ಗಾನ-ನಾಟ್ಯ-ಕುಂಚ ಮತ್ತು ಪ್ರಶಸ್ತಿ ಪ್ರದಾನ

ಮಂಗಳೂರು, ಮಾ. 31: ಯಕ್ಷಗಾನ ರಂಗದ ಅನುಪಮ ಸಂಘಟಕರೆನಿಸಿ, ಸ್ವತಃ ಕಲಾವಿದರಾಗಿ,ಭಾಗವತರಾಗಿ,ಮೇಳದ ಸಂಚಾಲಕರಾಗಿ ಪ್ರಸಿದ್ಧರಾಗಿದ್ದ ದಿ.ಕರ್ನೂರು ಕೊರಗಪ್ಪ ರೈ ಅವರ 'ಹತ್ತರ ನೆನಪು' ಕಾರ್ಯಕ್ರಮವು ಕರ್ನೂರು ಸ್ಮೃತಿ ಪರ್ವ-2018' ಎ.1 ರಂದು ಬೆಂಗಳೂರು ವಿಜಯನಗರದ ಬಂಟರ ಸಂಘ ಸಭಾಂಗಣದಲ್ಲಿ ದಿನಪೂರ್ತಿ ನಡೆಯಲಿದೆ. ಬೆಂಗಳೂರು ಕರ್ನಾಟಕ ಕಲಾಸಂಪದದ ಆಶ್ರಯದಲ್ಲಿ ಕರ್ನೂರು ಸುಭಾಷ್ ರೈ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ.
ಪೂರ್ವಾಹ್ನ ಹಿರಿಯ ಅರ್ಥಧಾರಿ, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ' ಕರ್ನೂರು ದಶಕದ ಸ್ಮೃತಿ' ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ದರ್ಬೆ ಚಂದ್ರಹಾಸ ರೈ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಮುಖ್ಯ ಅತಿಥಿಗಳಾಗಿರುವರು. ಸಾಯಂಕಾಲ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ.ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಕೆ.ಶ್ಯಾಮ ಭಟ್ ಸಂಸ್ಮರಣಾ ಜ್ಯೋತಿ ಬೆಳಗುವರು. ಕರ್ನಾಟಕ ಜಾನಪದ,ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡುವರು.
ಎಂ.ಆರ್.ಜಿ.ಗ್ರೂಪ್ ಛೇರ್ಮನ್ ಕೆ.ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ಸಿ.ಎಂ.ಡಿ ಕೆ.ಡಿ.ಶೆಟ್ಟಿ , ಕರ್ನಾಟಕ ರಾಜ್ಯ ಪಾನೀಯ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಬೆಂಗಳೂರು ತುಳು ಕೂಟದ ಅಧ್ಯಕ್ಷ ಜಯರಾಮ ಸೂಡ, ಪಂಚ ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ, ಸಂಗೀತ ನಿರ್ದೇಶಕ ಗುರುಕಿರಣ್, ಚಿತ್ರನಟ ಶಿವಧ್ವಜ್ ಶೆಟ್ಟಿ, ಭಾಗವತ ಪಟ್ಲ ಸತೀಶ್ ಶೆಟ್ಟಿ, ಕಲಾಪೋಷಕರಾದ ಉಮೇಶ್ ಶೆಟ್ಟಿ, ಪ್ರಶಾಂತ್ ಉಚ್ಚಿಲ್, ಮಧುಕರ ಶೆಟ್ಟಿ, ಕೆ.ವಿ.ರಾಜೇಂದ್ರ ಕುಮಾರ್, ರಾಘವೇಂದ್ರ ಶೆಟ್ಟಿ, ವೆಂಕಪ್ಪ ಹೆಗ್ಡೆ, ಉಪೇಂದ್ರ ಶೆಟ್ಟಿ, ವೆಂಕಟೇಶ್ ಮೂರ್ತಿ, ಆನಗಳ್ಳಿ ಕರುಣಾಕರ ಹೆಗ್ಡೆ, ಚೇವಾರು ಚಿದಾನಂದ ಕಾಮತ್, ಸಂತೋಷ್ ಶೆಟ್ಟಿ ಜಪ್ತಿ, ಪ್ರದೀಪ್ ಕುಮಾರ್ ಶೆಟ್ಟಿ, ಸುಂದರ್ ರಾಜ್ ರೈ ಅತಿಥಿಗಳಾಗಿರುವರು.
ಪ್ರಶಸ್ತಿ ಪ್ರದಾನ :
ಸಮಾರಂಭದಲ್ಲಿ ತೆಂಕು ಹಾಗೂ ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ, ಪ್ರಸ್ತುತ ಹನುಮಗಿರಿ ಮೇಳದ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರಿಗೆ 'ಕರ್ನೂರು ಪ್ರಶಸ್ತಿ-2018' ಪ್ರದಾನಮಾಡಲಾಗುವುದು. ಅಲ್ಲದೆ ಮದರ್ ಫೌಂಡೇಶನ್ ನ ರಾಜೇಶ್ ಶೆಟ್ಟಿ ಕುತ್ಯಾರು, ಮಯ್ಯ ಯಕ್ಷಕಲಾ ಪ್ರತಿಷ್ಠಾನದ ಮಣೂರು ವಾಸುದೇವ ಮಯ್ಯ , ತೆಂಕುತಿಟ್ಟಿನ ಹಿರಿಯ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಬಡಗಿನ ಪ್ರಸಿದ್ಧ ವೇಷಧಾರಿ ಐರೋಡಿ ಗೋವಿಂದಪ್ಪ, ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಕೆ.ಭಟ್ ಬೆಳ್ಳಾರೆ, ಶೀಲಾ ಎಕ್ಯುಪ್ ಮೆಂಟ್ಸ್ ನ ವಿಜಯ ಶೆಟ್ಟಿ ಹಾಲಾಡಿ ದಂಪತಿಗೆ ' ಕಲಾಸಂಪದ ಪ್ರಶಸ್ತಿ' ನೀಡಲಾಗುವುದು.
ಯಕ್ಷರಂಜನೆ-ಪ್ರದರ್ಶನ:
ಕರ್ನೂರು ಸ್ಮೃತಿ ಪರ್ವದ ಅಂಗವಾಗಿ ಬೆಳಿಗ್ಗೆ ನಡೆಯುವ 'ವೀರ ತರಣಿಸೇನ ' ತಾಳಮದ್ದಳೆಯಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಕದ್ರಿ ನವನೀತ ಶೆಟ್ಟಿ, ಅವಿನಾಶ್ ಶೆಟ್ಟಿ ಉಬರಡ್ಕ ಅರ್ಥಧಾರಿಗಳಾಗಿರುವರು. ರವಿಚಂದ್ರ ಕನ್ನಡಿಕಟ್ಟೆ ,ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಶ್ರೀಶ ರಾವ್ ನಿಡ್ಲೆ ಹಿಮ್ಮೇಳದಲ್ಲಿರುವರು. ಬಳಿಕ ' ಯಕ್ಷ-ಗಾನ-ನೃತ್ಯ-ಕುಂಚ ' ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಪಟ್ಲ ಸತೀಶ್ ಶೆಟ್ಟಿ, ರಾಘವೇಂದ್ರ ಮಯ್ಯ, ರವಿಚಂದ್ರ ಕನ್ನಡಿಕಟ್ಟೆ, ಸುರೇಶ್ ಶೆಟ್ಟಿ ಶಂಕರನಾರಾಯಣ, ಗಿರೀಶ್ ರೈ ಕಕ್ಕೆಪದವು ಹಾಡುಗಾರಿಕೆಯಲ್ಲಿ ಭಾಗವಹಿಸುವರು. ಎ.ಪಿ.ಪಾಠಕ್, ಗುರುಪ್ರಸಾದ್ ಮತ್ತು ಶ್ರೀಶ ರಾವ್ ನಿಡ್ಲೆ ಹಿಮ್ಮೇಳ ನೀಡುವರು. ಇದೇ ಸಂದರ್ಭದಲ್ಲಿ ತೆಂಕು-ಬಡಗು ಯಕ್ಷನಾಟ್ಯದಲ್ಲಿ ಚಂದ್ರಶೇಖರ ಧರ್ಮಸ್ಥಳ, ಅಕ್ಷಯ ಕುಮಾರ್ ಮಾರ್ನಾಡ್, ರಾಜೇಶ್ ನಿಟ್ಟೆ, ವಿಶ್ವನಾಥ ಹೆನ್ನಾಬೈಲ್, ಸುಧೀರ್ ಉಪ್ಪೂರು ಹಾಗೂ ಡಾ.ವರ್ಷಾ ಶೆಟ್ಟಿ, ಕು.ದಿಶಾ ಶೆಟ್ಟಿ ಕಟ್ಲ, ಕು.ಅರ್ಪಿತಾ ಹೆಗ್ಡೆ, ಕು.ನಾಗಶ್ರೀ ಗೀಜಗಾರು ನೃತ್ಯಾಭಿನಯ ಪ್ರದರ್ಶಿಸುವರು. ಕುಂಚ ಕಲಾವಿದ ಮುರಳೀಧರ ಆಚಾರ್ಯ ಆಲಂಗಾರ್ ಚಿತ್ರ ಬಿಡಿಸುವರು.
ಸಮಾರೋಪ ಸಮಾರಂಭದ ಬಳಿಕ ತೆಂಕು ಹಾಗೂ ಬಡಗುತಿಟ್ಟಿನ ಕಲಾವಿದರ ಸಮ್ಮಿಲನದಲ್ಲಿ ' ಭಸ್ಮಾಸುರ ಮೋಹಿನಿ ' ಯಕ್ಷಗಾನ ಬಯಲಾಟವನ್ನು ಏರ್ಪಡಿಸಲಾಗಿದೆ. ಪುತ್ತೂರು ಶ್ರೀಧರ ಭಂಡಾರಿ, ಮಧೂರು ರಾಧಾಕೃಷ್ಣ ನಾವಡ, ಬೇಗಾರು ಶಿವಕುಮಾರ್, ಸೀತಾರಾಮ ಕುಮಾರ್ ಕಟೀಲು, ನರಸಿಂಹ ಚಿಟ್ಟಾಣಿ, ರಕ್ಷಿತ್ ಶೆಟ್ಟಿ ಪಡ್ರೆ, ವಿಜಯ್ ಶಂಕರ ಆಳ್ವ ಮತ್ತಿತರರು ಪಾತ್ರ ವಹಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕಲಾಭಿಮಾನಿಗಳಿಗೆ ಮುಕ್ತ ಸ್ವಾಗತವಿದೆಯೆಂದು ಕಲಾಸಂಪದದ ಮುಂಬೈ ಸಂಚಾಲಕ ಕರ್ನೂರು ಮೋಹನ್ ರೈ ಮತ್ತು ಬೆಂಗಳೂರು ಕರ್ನಾಟಕ ಕಲಾಸಂಪದದ ಅಧ್ಯಕ್ಷ ಕರ್ನೂರು ಸುಭಾಷ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







