ಕಾನೂನು ಬಾಹಿರ ಚಟುವಟಿಕೆ: ಕೆದೂರು ಸ್ಪೂರ್ತಿಧಾಮದ ಪರವಾನಿಗೆ ರದ್ಧತಿಗೆ ನಿರ್ದೇಶನ
ಉಡುಪಿ, ಮಾ.31: ಕುಂದಾಪುರ ತಾಲೂಕಿನ ಕೆದೂರು ಬೇಳೂರು ಸ್ಪೂರ್ತಿ ಧಾಮದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ತನಿಖೆ ಯಿಂದ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಿಗೆಯನ್ನು ರದ್ದು ಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸ್ಪೂರ್ತಿಧಾಮ ಸಂಸ್ಥೆಯ ವಿರುದ್ಧ ಮಹಾಬಲ ಕುಂದರ್ ಹಾಗೂ ಕೆ.ರಾಮ ಪೂಜಾರಿ 2016ರ ಸೆ.28 ಮತ್ತು ಅ.25ರಂದು ಸರಕಾರಕ್ಕೆ ದೂರು ನೀಡಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯ ಕುರಿತು ಸಮಗ್ರ ತನಿಖೆ ನಡೆಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ತಂಡವನ್ನು ರಚಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ತಂಡ, ಸಂಸ್ಥೆಯು ನಡೆಸುತ್ತಿರುವ ವೃದ್ಧಾಶ್ರಮ ಹಾಗೂ ದತ್ತು ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಭಾರೀ ಪ್ರಮಾಣದ ಲೋಪ ದೋಷಗಳಿದ್ದು, ವಾಸ್ತವ್ಯಕ್ಕೆ ಪೂರಕ ವಾತಾವರಣ ಇಲ್ಲ ಮತ್ತು ಸಂಸ್ಥೆ ಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದುದರಿಂದ ಈ ಕುರಿತು ಸಮಗ್ರ ಕ್ರಿಮಿನಲ್ ತನಿಖೆ ನಡೆಯುವವರೆಗೆ ಸಂಸ್ಥೆಗೆ ನೀಡಿರುವ ಎಲ್ಲ ಪರವಾನಿಗೆಯನ್ನು ಅಮಾನತ್ತಿನಲ್ಲಿ ರಿಸಬೇಕು ಎಂದು ತನಿಖಾ ತಂಡದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಸ್ಥೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಿರುವ ಎಲ್ಲ ಪರವಾನಿಗೆಯನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ತನಿಖಾ ತಂಡ ನಿರ್ದೇಶಿಸಿರುವ ಹಿನ್ನೆಲೆ ಯಲ್ಲಿ ಇಲಾಖೆಯ ಅನುದಾನದಡಿಯಲ್ಲಿ ನಡೆಯುತ್ತಿರುವ ಇಲ್ಲಿನ ವೃದ್ಧಾ ಶ್ರಮವನ್ನು ತಕ್ಷಣವೇ ಸ್ಥಗಿತಗೊಳಿಸಲು ಹಾಗೂ ಈ ಸಂಸ್ಥೆಗೆ ಯಾವುದೇ ಅನುದಾನ ಬಿಡುಗಡೆ ಮಾಡದಂತೆ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಈ ಸಂಸ್ಥೆಯಲ್ಲಿ ದಾಖಲಾಗಿರುವ ಹಿರಿಯ ನಾಗರಿಕರು/ವೃದ್ಧರನ್ನು ಸ್ಥಳೀಯ ವಾಗಿ ಅಥವಾ ಮಂಗಳೂರಿನಲ್ಲಿ ನಡೆಯುತ್ತಿರುವ ಅಭಯಾಶ್ರಮಕ್ಕೆ ದಾಖಲಿ ಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಇಲಾಖೆಗೆ ಸಂಬಂಧಪಟ್ಟ ಸಾಮಾಗ್ರಿ ಗಳನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ವಶಪಡಿಸಿಕೊಳ್ಳಬೇಕು ಎಂದು ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಶೀಘ್ರವೇ ಕ್ರಮ: ನಿರಂಜನ್ ಭಟ್
‘ಇಲಾಖೆಯ ನಿರ್ದೇಶಕರ ನಿರ್ದೇಶನದಂತೆ ಕೆದೂರು ಸ್ಪೂರ್ತಿಧಾಮದ ಪರವಾನಿಗೆ ರದ್ಧತಿ ಪ್ರಕ್ರಿಯೆ ಜಿಲ್ಲಾಡಳಿತದಿಂದ ನಡೆಯುತ್ತಿದ್ದು, ಈ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಹಿರಿಯ ನಾಗರಿಕರ ರಕ್ಷಣಾ ಸಮಿತಿಯ ಸಭೆಯನ್ನು ಕರೆದು ಸ್ಪೂರ್ತಿಧಾಮದಲ್ಲಿರುವ ಹಿರಿಯ ನಾಗರಿಕರನ್ನು ಸ್ಥಳೀಯ ಅಥವಾ ಮಂಗಳೂರಿನ ವೃದ್ಧಾಶ್ರಮಗಳಿಗೆ ವರ್ಗಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳ ಲಾಗುವುದು’ ಎಂದು ಉಡುಪಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ನಿರಂಜನ್ ಭಟ್ ಪತ್ರಿಕೆಗೆ ತಿಳಿಸಿದ್ದಾರೆ.







