ಮಹಿಳಾ ಚಳವಳಿಗೆ ಯುವತಿಯರು ನಾಯಕತ್ವ ವಹಿಸಬೇಕು: ಡಾ.ವಿಜಯಮ್ಮ

ಬೆಂಗಳೂರು, ಮಾ.31: ಭಾರತೀಯ ಸಂದರ್ಭಕ್ಕೆ ಅಗತ್ಯವಾದ ಸ್ತ್ರೀವಾದವನ್ನು ನಾವು ಕಟ್ಟಿಕೊಳ್ಳಬೇಕು. ಹೀಗಾಗಿ, ಸಮಾಜದ ಆರೋಗ್ಯಕ್ಕಾಗಿ ನಡೆಯುವ ಎಲ್ಲ ರೀತಿಯ ಮಹಿಳಾ ಚಳವಳಿಗಳಿಗೆ ಯುವತಿಯರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮುನ್ನಡೆ ಸಂಘಟನೆಯಿಂದ ನಗರದ ಜೈ ಭೀಮ್ ಭವನದಲ್ಲಿ ಆಯೋಜಿಸಿದ್ದ ‘ಮಹಿಳೆ, ಸಂಧಾನ ಮತ್ತು ಸಮಕಾಲೀನ ಸಂದರ್ಭ: ಯುವ ತಲೆಮಾರಿನ ದೃಷ್ಟಿಯಲ್ಲಿ ಯುವ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆಗೆ ತಕ್ಕ ರೀತಿಯಲ್ಲಿ ನಮ್ಮ ವಾದಗಳನ್ನು ಬದಲಿಸಿಕೊಂಡು ಮುನ್ನಡೆಯಬೇಕಿದೆ. ಅಲ್ಲದೆ, ಇಂದಿನ ಬಹುತೇಕ ಚಳವಳಿಗಳು ಹಿರಿಯರ ನಾಯಕತ್ವ ವಹಿಸಿಕೊಳ್ಳುತ್ತಿವೆ. ಹೀಗಾಗಿ, ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲಿ ಮುಂದಿನ ಚಳವಳಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇಂದು ದೇವದಾಸಿ ಮಹಿಳೆಯರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅವರ ಮಕ್ಕಳನ್ನು ಶಾಲೆಗೆ ದಾಖಲಾಗುವಾಗ ತಂದೆಯ ಹೆಸರು ಹೇಳಲೇಬೇಕು ಎಂದು ಒತ್ತಾಯ ಮಾಡುವುದನ್ನು ನಾವು ಗಮನಿಸಿದ್ದು, ಇದು ಮಗು ಹಾಗೂ ತಾಯಿಯನ್ನು ಶೋಷಣೆ ಮಾಡಿದಂತಾಗುತ್ತದೆ. ನನ್ನ ಪತಿಯ ಹೆಸರು ಬರೆಯಲಿಲ್ಲ ಎಂಬ ಕಾರಣಕ್ಕೆ ಪಾಸ್‌ಪೋರ್ಟ್ ಸಿಗುವುದಿಲ್ಲ. ಇವೆಲ್ಲವೂ ಪುರುಷಾಧಿಪತ್ಯ ಸಮಾಜದ ಉದಾಹರಣೆಗಳಾಗಿವೆ ಎಂದು ಹೇಳಿದರು.
ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಮಹಿಳೆಯರ ಶೀಲದೊಂದಿಗೆ ಸಮೀಕರಿಸುವುದು ಸರಿಯಲ್ಲ. ಎಲ್ಲಾ ಹೆಣ್ಣು ಮಕ್ಕಳು ಈ ಒತ್ತಡದಿಂದ ಹೊರಬರಬೇಕು. ಸಮಾಜ ಇವುಗಳನ್ನು ದೌರ್ಬಲ್ಯ ಎಂದು ಕರೆಯುತ್ತಿದೆ ನಾವು ಅದನ್ನು ದೌರ್ಬಲ್ಯ ಎಂದು ಪರಿಗಣಿಸದೆ ಅದನ್ನು ಧಿಕ್ಕರಿಸಿ ನಮ್ಮ ಶಕ್ತಿಯಿಂದ ಮುನ್ನಡೆಯಬೇಕು ಎಂದು ವಿಜಯಮ್ಮ ತಿಳಿಸಿದರು.
ಮಾಧ್ಯಮಗಳು ಉಳ್ಳವರ ಕೈಯಲ್ಲಿದ್ದು, ಮಹಿಳೆಯರ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ. ನಾವು ಸಮಾಜವನ್ನು ಬದಲಾಯಿಸಲು ಮುಂದಾಗಿದ್ದು, ಎಲ್ಲರೂ ನಮಗೆ ಬೆಂಬಲ ನೀಡಬೇಕಿದೆ. ಈ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಜನಶಕ್ತಿ ಸಂಘಟನೆ ಸದಸ್ಯೆ ಗೌರಿ ಮಾತನಾಡಿ, ದಿಲ್ಲಿಯಲ್ಲಿರುವ ಮಹಿಳಾ ವಿಜ್ಞಾನಿಗಳು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ಅಲ್ಲದೆ, ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿ ಕೊರತೆ ನೆಪವೊಡ್ಡಿ ಪ್ರಕರಣಗಳನ್ನು ಖುಲಾಸೆ ಮಾಡುತ್ತಿರುವುದು ದೌರ್ಜನ್ಯಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ರೈತ ಸಂಘದ ನಳಿನಿ, ಮಂಜುಳಾ ಹುಲಿಕುಂಟೆ, ಮುಸ್ಲಿಂ ಮಹಿಳಾ ಆಂದೋಲನದ ನಸ್ರೀನ್, ವಕೀಲೆ ಸವಿತಾ ಹಾಗೂ ಮಂಜುಳಾ ತೆಲಗಡೆ ಉಪಸ್ಥಿತರಿದ್ದರು.







