ಹೈದರಾಬಾದ್ ವಿ.ವಿ. ಉಪಕುಲಪತಿ ಹತ್ಯೆಗೆ ಸಂಚು : ಇಬ್ಬರು ಹಳೆ ವಿದ್ಯಾರ್ಥಿಗಳ ಬಂಧನ

ಹೈದರಾಬಾದ್, ಮಾ. 31: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಅಪ್ಪಾ ರಾವ್ ಪೊಡಿಲೆ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಅದೇ ವಿ.ವಿ.ಯ ಇಬ್ಬರು ಹಳೆ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಪೂರ್ವ ಗೋದಾವರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರೋಹಿತ್ ಮೇಮುಲಾ ಆತ್ಮಹತ್ಯೆ ಬಳಿಕ ಉಪ ಕುಲಪತಿ ವಿರುದ್ಧ ವಿದ್ಯಾರ್ಥಿಗಳಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಅಪ್ಪಾ ರಾವ್ ಅವರನ್ನು ಹತ್ಯೆಗೈಯಲು ಇವರು ಯೋಜಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
2016 ಜನವರಿಯಲ್ಲಿ ವೇಮುಲಾ ಸಾವಿನ ಬಗ್ಗೆ ಸಾಮೂಹಿಕ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ವೇಮುಲಾ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆದಿತ್ತು.
ಸಿಪಿಐಯ ತೆಲಂಗಾಣ ರಾಜ್ಯ ಸಮಿತಿ (ಮಾವೊವಾದಿ) ಕಾರ್ಯದರ್ಶಿ ನಾರಾಯಣ ಆಲಿಯಾಸ್ ಹರಿಭೂಷಣ್ ಅವರನ್ನು ಭೇಟಿಯಾದ ಬಳಿಕ ಕಾಡಿನಿಂದ ಹಿಂದಿರುಗುತ್ತಿದ್ದಾಗ ಈ ಇಬ್ಬರನ್ನು ಭದ್ರಾಚಲಂ-ಚೇರ್ಲಾ ರಸ್ತೆಯ ಪಿಟ್ಚುಕುಲಪ್ಪಡು ಜಂಕ್ಷನ್‌ನಿಂದ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಂಕಾಲಾ ಪೃಥ್ವಿರಾಜ್ (27) ಹಾಗೂ ಚಂದನ್ ಕುಮಾರ್ (28) ಬಂಧಿತರು.





