ತಜ್ಞರ ಅಭಿಪ್ರಾಯಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲ್ಲ : ಹೈಕೋರ್ಟ್

ಬೆಂಗಳೂರು, ಮಾ.31: ತಜ್ಞರ ಅಭಿಪ್ರಾಯಗಳನ್ನು ನ್ಯಾಯಾಲಯಗಳು ಬದಲಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಮೀರತ್ ಮೂಲದ ವ್ಯಕ್ತಿಯೊಬ್ಬರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ(ಐಐಎಂ-ಬಿ) ಕೊರ್ಸ್‌ಗೆ ಪ್ರವೇಶಾತಿ ಕಲ್ಪಿಸದ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದೆ.
ಸಂದರ್ಶನದಲ್ಲಿ ಎರಡು ಬಾರಿ ಅನುತ್ತಿರ್ಣನಾದ ಕಾರಣ ತಮ್ಮನ್ನು ಫೆಲೊಶಿಪ್ ತೊರೆಯುವಂತೆ ಸೂಚಿಸಿದ್ದ ಐಐಎಂ-ಬಿ ಆಡಳಿತ ಮಂಡಳಿ ಕ್ರಮ ಪ್ರಶ್ನಿಸಿ ಮೀರತ್‌ನ ಅಮಿತ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೊರ್ಟ್, ಐಐಎಂ-ಬಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಅಭ್ಯರ್ಥಿ ಕಾರ್ಯಕ್ಷಮತೆ ಪರಿಶೀಲಿಸಿ, ಮೌಲ್ಯಮಾಪನ ನಡೆಸುವ ಕಾರ್ಯ ವಿಧಾನವನ್ನು ಸಂಸ್ಥೆಯು ಅನುಸರಿಸಿರುತ್ತದೆ. ಶೈಕ್ಷಣಿಕ ವಿಷಯಗಳಲ್ಲಿ ತಜ್ಞರು ನೀಡಿರುವ ಅಭಿಪ್ರಾಯಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣವೇನು: 2013ನೆ ಸಾಲಿನಲ್ಲಿ ಸಾಂಸ್ಥಿಕ ಕಾರ್ಯತಂತ್ರ ಹಾಗೂ ನೀತಿ ವಿಷಯದ ಫೆಲೊಶಿಪ್‌ಗಾಗಿ ಐಐಎಂ-ಬಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಅಮಿತ್, ಎರಡು ವರ್ಷಗಳ ಕೊರ್ಸ್ ಬಳಿಕ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ನಿಯಮದಂತೆ ವ್ಯಾಪಾರ ಇತಿಹಾಸ ವಿಷಯದ ಮೇಲೆ ಸಂಶೋಧನಾ ಪ್ರಬಂಧ ರಚಿಸಿ ಸಲ್ಲಿಸಿದ್ದರು.
2015ರ ಸೆಪ್ಟಂಬರ್‌ನಲ್ಲಿ ಮೊದಲ ಬಾರಿ ಸಂದರ್ಶನ ಎದುರಿಸಿದ್ದ ಅಮಿತ್‌ಗೆ, ಸಂಶೋಧನಾ ಪ್ರಬಂಧವು ನಿರೀಕ್ಷಿತ ಮಟ್ಟದಲ್ಲಿಲ್ಲ. ಹೀಗಾಗಿ ಹೊಸದಾಗಿ ಪ್ರಬಂಧ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಎರಡನೆ ಬಾರಿ ಪ್ರಬಂಧ ರಚಿಸಿ ನವೆಂಬರ್‌ನಲ್ಲಿ ಮತ್ತೆ ಸಂದರ್ಶನ ಎದುರಿಸಿದ್ದರು.
ಆದರೆ, ಎರಡನೆ ಬಾರಿಯೂ ಅವರ ಪ್ರಬಂಧವನ್ನು ತಿರಸ್ಕರಿಸಿದ್ದ ಸಂದರ್ಶಕರು, ಫೆಲೊಶಿಪ್ ತೊರೆದು ಹೋಗುವಂತೆ ನಿರ್ದೇಶಿಸಿದ್ದರು. ಇದನ್ನು ಅಮಿತ್ ಮೇಲ್ಮನವಿ ಸಮಿತಿಯಲ್ಲಿ ಪ್ರಶ್ನಿಸಿದ್ದರಾದರೂ ಸಮಿತಿಯು ಅವರ ಮನವಿ ತಿರಸ್ಕರಿಸಿತ್ತು. ಬಳಿಕ ಅಮಿತ್ ಹೈಕೋರ್ಟ್ ಮೊರೆ ಹೋಗಿದ್ದರು.







