ನೂತನ ವೆಬ್ ಪೋರ್ಟಲ್‌ಗೆ ಷೇರುದಾರರಿಗೆ ಆಹ್ವಾನ
ಬೆಂಗಳೂರು, ಮಾ.31: ಇಂಡಿಯನ್ ನ್ಯಾಷನಲ್ ಕೋ-ಅಪರೇಟಿವ್ ಸೊಸೈಟಿಯು ನೂತನ ವೆಬ್ ಪೋರ್ಟಲ್ ಆರಂಭಿಸಲಿದ್ದು, ಕರ್ನಾಟಕದಲ್ಲಿ ಸದಸ್ಯತ್ವ ಪಡೆಯಲು ಆಸಕ್ತಿಯುಳ್ಳವರು ಸೊಸೈಟಿಯ ಸದಸ್ಯರನ್ನು ಸಂಪರ್ಕ ಮಾಡಬಹುದು ಎಂದು ಸೊಸೈಟಿ ಮುಖಂಡ ವಿನೋದ್ ಚಾಂದ್ ತಿಳಿಸಿದ್ದಾರೆ.
ಶನಿವಾರ ಮಾತನಾಡಿದ ಅವರು, ದೇಶದ ಜನರ ಹಿತ ಕಾಯುವ, ಭ್ರಷ್ಟಾಚಾರ ಬಯಲಿಗೆಳೆಯುವ ಮಾಧ್ಯಮಗಳು ಬೇಕು. ಈ ನಿಟ್ಟಿನಲ್ಲಿ ಸಾಮೂಹಿಕ ಕೇಂದ್ರೀಕೃತ ಒಡೆತನದ ಸ್ವತಂತ್ರ ಮಾಧ್ಯಮ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ. ಅದಕ್ಕೆ ಷೇರುದಾರರು ಬೇಕಾಗಿದ್ದಾರೆ ಎಂದು ತಿಳಿಸಿದರು.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಈ ವೆಬ್ ಪೋರ್ಟಲ್ ಆರಂಭಿಸಲು ಉದ್ದೇಶಿಸಲಾಗಿದೆ. ಸೊಸೈಟಿಯ ಸದಸ್ಯರಾಗಲು ಇಚ್ಛಿಸುವವರು 500 ರೂ. ಮೌಲ್ಯದ, ಅಂದರೆ 10 ರೂ. ಮುಖಬೆಲೆಯ 50 ಷೇರುಗಳನ್ನು ಕೊಳ್ಳಬೇಕು. ಇದು ಸ್ವಯಂ ನಿಧಿಯಿಂದ ನಡೆಯುವ ಸೊಸೈಟಿಯಾಗಿದ್ದು, ಇದರ ಚಟುವಟಿಕೆ ನಡೆಸಲು ದೇಣಿಗೆ ನೀಡಬೇಕಾಗುತ್ತದೆ. ಇದರಿಂದ ಸದಸ್ಯರಿಗೆ ಯಾವುದೇ ಲಾಭ ನೀಡಲಾಗುವುದಿಲ್ಲ ಎಂದು ಹೇಳಿದರು.
ಸದಸ್ಯರು ತನ್ನ ಹೆಸರಿನಲ್ಲಿ 1 ಲಕ್ಷ ರೂ. ಠೇವಣಿಯಿಟ್ಟು, ಅದರಿಂದ ಬರುವ ಬಡ್ಡಿಯನ್ನು ಸೊಸೈಟಿಗೆ ನೀಡಬಹುದು. ಒಂದು ವೇಳೆ ಹೊರಹೋಗಲು ಬಯಸಿದಲ್ಲಿ 6 ತಿಂಗಳು ಮುಂಚಿತವಾಗಿ ನೋಟಿಸ್ ನೀಡಬೇಕು. ಆ ಜಾಗಕ್ಕೆ ಬರುವ ಮತ್ತೊಬ್ಬರಿಗೆ ಷೇರುಗಳನ್ನು ವರ್ಗಾಯಿಸಲಾಗುತ್ತದೆ. ಒಟ್ಟಾರೆ ಜನರಿಗೆ ಸುದ್ದಿ ಮತ್ತು ಪೂರ್ವಗ್ರಹ ಮುಕ್ತ ವಿಶ್ಲೇಷಣೆ ನೀಡುವುದು ನಮ್ಮ ಗುರಿಯಾಗಿದೆ ಎಂದರು.
ಸೊಸೈಟಿಯು ಒಂದು ಸಾವಿರ ಶೇರುದಾರ ಸದಸ್ಯರನ್ನು ಹೊಂದಿರಲಿದ್ದು, ಅದರಲ್ಲಿ 900 ಮಂದಿ ಸಾಮಾನ್ಯ ಸದಸ್ಯರಿದ್ದರೆ, 100 ಮಂದಿ ಪತ್ರಕರ್ತ ಶೇರುದಾರರಾಗಿರುತ್ತಾರೆ. ಇವರು ಮಾಡುವ ಪೂರ್ಣಾವಧಿ ಅಥವಾ ಅಲ್ಪಾವಧಿ ಕೆಲಸಕ್ಕೆ ಮಾರುಕಟ್ಟೆ ದರದಲ್ಲಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ, ಸುದ್ದಿ ಮಾಧ್ಯಮವನ್ನು ನಡೆಸಲು ವೇತನ ಪಡೆಯುವ ಇನ್ನಷ್ಟು ನೌಕರರನ್ನು ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಸೊಸೈಟಿಯು ಹಣಕಾಸಿನ ಅಗತ್ಯಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ವಿಶಿಷ್ಟವಾದ ಆರ್ಥಿಕ ಮಾದರಿಯನ್ನು ಅಳವಡಿಸಿಕೊಳ್ಳುತ್ತಾ, ತನ್ನ ಪ್ರಕಾಶನ ಮತ್ತು ಮಾಧ್ಯಮ ಕೆಲಸಕ್ಕಾಗಿ ಯಾವುದೇ ಜಾಹೀರಾತುಗಳನ್ನು ಅವಲಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಷೇರುದಾರರು ಚುನಾವಣಾ ಪ್ರಕ್ರಿಯೆಯ ಮೂಲಕ 20 ಜನರ ಮೇಲ್ವಿಚಾರಣಾ ಮಂಡಳಿಯನ್ನು ರಚಿಸಲಿದ್ದು, ಈ ಸಮಿತಿಯು ಸಂಪಾದಕ ಮಂಡಳಿಗೆ ನಿರ್ದಿಷ್ಟವಾದ ನಿರ್ದೇಶನ ನೀಡುತ್ತದೆ. ಸುದ್ದಿ ಹಾಗೂ ದೃಷ್ಟಿಕೋನಗಳ ಪರಿಣಾಮಕಾರಿ ಪ್ರಸರಣದ ಮೂಲಕ ಪ್ರಜಾತಂತ್ರವನ್ನು ರಕ್ಷಿಸುವ ಸೊಸೈಟಿಯ ಮೂಲ ಉದ್ದೇಶದಿಂದ ದೂರ ಸರಿಯದಂತೆ ಎಚ್ಚರ ವಹಿಸುವ ಕೆಲಸ ಈ ಮಂಡಳಿ ಮಾಡಲಿದೆ ಎಂದು ವಿವರಿಸಿದರು. ಸೊಸೈಟಿ ಷೇರುದಾರರಾಗಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ.9902616196 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಮುಖಂಡ ಮುತ್ತುರಾಜು, ರವಿನಾರಾಯಣ್, ದೇವೆಂದ್ರ ವರ್ಮ, ಪಿ.ಕೆ.ಸುದರ್ಶನ್, ವಿಜಯ್ ಗಾಯಕವಾಡ್ ಉಪಸ್ಥಿತರಿದ್ದರು.







