ಧರ್ಮಾಂಧ ಪಟ್ಟಭದ್ರರಿಂದ ಸಂವಿಧಾನಕ್ಕೆ ಅಪಾಯ: ಗೊ.ರು.ಚನ್ನಬಸಪ್ಪ
ಬೆಂಗಳೂರು, ಮಾ.31: ಅಧಿಕಾರದ ವ್ಯಾಮೋಹ, ಜಾತಿ-ಧರ್ಮಾಂಧತೆಯಿಂದಾಗಿ ಕೆಲ ಪಟ್ಟಭದ್ರರು ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನವನ್ನು ವಿಕೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಚಿಂತಕ ಗೊ.ರು.ಚನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.
ಶನಿವಾರ ಕರ್ನಾಟಕ ಸಾಹಿತ್ಯ ಪರಿಷತ್ ನಗರದ ಪಂಪ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ ಡಾ.ಸಿ.ವೀರಣ್ಣರವರ ‘ಬುದ್ಧ ಬಸವ ಅಂಬೇಡ್ಕರ್, ಮಾನವತಾವಾದಿ ಗೌತಮಬುದ್ಧ ಹಾಗೂ ಶೈವ ಸಂಸ್ಕೃತಿಯ ಕವಿ ರಾಘವಾಂಕ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇವತ್ತಿಗೂ ಹೊಟ್ಟೆಗೆ ಊಟವಿಲ್ಲದೆ, ಮಲಗಲು ಸೂರಿಲ್ಲದೆ ಲಕ್ಷಾಂತರ ಜನ ನರಳುತ್ತಿದ್ದಾರೆ. ಇದನ್ನು ಸರಿಪಡಿಸಿ, ಸಮಾಜವನ್ನು ಸ್ವಸ್ಥವಾಗಿಡಬೇಕಾದ ನಾಯಕರು ಅಧಿಕಾರದ ವ್ಯಾಮೋಹದಲ್ಲಿ ಮುಳುಗಿದ್ದಾರೆ. ಇವರ ಸ್ವಾರ್ಥವು ಸಂವಿಧಾನವನ್ನು ವಿಕೃತಗೊಳಿಸುವ ಮಟ್ಟಕ್ಕೆ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಮಾನವತಾವಾದಿಗಳಾದ ಬುದ್ಧ, ಬಸವ ಹಾಗೂ ಅಂಬೇಡ್ಕರ್‌ರವರ ಚಿಂತನೆಗಳು ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದರು.
ಸಮಾಜದ ಪ್ರತಿಯೊಬ್ಬರು ವರ್ಣಾಶ್ರಮ, ಜಾತಿ ಪದ್ಧತಿಯ ಬೇಲಿಯನ್ನು ಕಿತ್ತೊಗೆದು, ಬುದ್ಧನ ಆತ್ಮಪ್ರಜ್ಞೆ, ಬಸವಣ್ಣನ ಲೋಕಹಿತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಸಮಾಜದ ಚಿಂತನೆಗಳನ್ನು ಮೈ ಗೂಡಿಸಿಕೊಳ್ಳಬೇಕು. ಸಮಾಜದಲ್ಲಿರುವ ಅಸಂಗತ ವಿಚಾರಗಳಿಂದ ದೂರವಾಗಿ ಸುಸಂಗತವಾದ ವೈಜ್ಞಾನಿಕ ಚಿಂತನೆಗಳತ್ತ ತಮ್ಮ ಮನಸುಗಳನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.
ಇವತ್ತಿನ ಆಧುನಿಕ ಸಮಾಜವು ಹೊರಗಿನ ವೇಶಭೂಷಣಗಳಿಂದ ನಾಗರಿಕತೆಯಂತೆ ಕಾಣಬಹುದು. ಆದರೆ, ಮನುಷ್ಯ ಅಂತರಂಗದಲ್ಲಿರುವ ಮೃಗೀಯ ಗುಣಗಳು ಸಂಪೂರ್ಣವಾಗಿ ನಾಶವಾಗಿಲ್ಲ. ನಾಗರಿಕತೆಯ ರೂಪಕವಾಗಿ ಕಟ್ಟಿಕೊಂಡು ದೇವರು, ಧರ್ಮ, ಸಮಾಜ ಹಾಗೂ ಆದ್ಯಾತ್ಮಿಕ ಚಿಂತನೆಗಳೆ ಈಗ ಮೋಸದ ಜಾಲವಾಗಿವೆ. ಹೀಗಾಗಿ ಇಂತಹ ಮೂಲಭೂತವಾದಿ ಸಿದ್ಧಾಂತಗಳನ್ನು ಪ್ರಶ್ನಿಸಿ, ಮನುಷ್ಯನ ಚಿಂತನೆಗಳನ್ನು ವಿಸ್ತರಿಸಲಿಕ್ಕೆ ಕಾರಣವಾದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ವಿಚಾರಗಳು ಇವತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು ಎಂದು ಅವರು ತಿಳಿಸಿದರು.
ಮಾನವತಾವಾದಿ ಗೌತಮಬುದ್ಧ ಕೃತಿಯ ಕುರಿತು ಚಿತ್ರ ನಿರ್ದೇಶಕ ಬಿ.ಸುರೇಶ್ ಮಾತನಾಡಿ, ಬಲಪಂಥಿಯರ ಉದ್ಧಟತನ ಹೆಚ್ಚಿರುವ ಇವತ್ತಿನ ಕಾಲಘಟ್ಟದಲ್ಲಿ ಬುದ್ಧನ ಚಿಂತನೆಗಳು ಎಂದಿಗಿಂತಲೂ ಇಂದು ಪ್ರಸ್ತುತವಾಗಿವೆ. ಈ ನಿಟ್ಟಿನಲ್ಲಿ ಡಾ.ಸಿ.ವೀರಣ್ಣ ಬರೆದಿರುವ ‘ಮಾನವತಾವಾದಿ ಗೌತಮಬದ್ಧ’ ನಾಟಕ ಕೃತಿಯು ಶೀಘ್ರವೆ ರಂಗರೂಪಕ್ಕೆ ಬರಬೇಕೆಂದು ಆಶಿಸಿದರು.
ಕೃತಿಕಾರ ಡಾ.ಸಿ.ವೀರಣ್ಣ ಮಾತನಾಡಿ, ಸ್ವಾಮಿ ವಿವೇಕಾನಂದರು ನಿಜವಾದ ಚಿಂತನೆಗಳು ಇಂದಿಗೂ ಜನರಿಗೆ ತಲುಪಿಲ್ಲ. ಇವರ ಚಿಂತನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಪ್ರಗತಿಪರರು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಾದರು ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್ ತತ್ವಾದರ್ಶಗಳು ಜನಸಾಮಾನ್ಯರಿಗೆ ಮುಟ್ಟುವಂತಹ ಕೆಲಸವಾಗಲಿ ಎಂದು ಆಶಿಸಿದರು.
ದೇಶದಲ್ಲಿ ಜಾತಿ, ಧರ್ಮ ತೊಲಗಬೇಕಾದರೆ ಅಂತರ್‌ಜಾತಿ ವಿವಾಹವಾಗುವುದೊಂದೆ ಪರಿಹಾರವಾಗಿದೆ. ಇದನ್ನು 12ನೆ ಶತಮಾನದಲ್ಲಿಯೆ ಬಸವಣ್ಣ ಸಾಬೀತು ಮಾಡಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅಂತರ್‌ಜಾತಿ ವಿವಾಹಿತರಿಗೆ ಸರಕಾರಿ ನೌಕರಿ ಕೊಡುವಂತಹ ಹೊಸ ಕಾನೂನನ್ನು ಜಾರಿ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ಕಾ.ವೆಂ.ಶ್ರೀನಿವಾಸ ಮೂರ್ತಿ ಶೈವ ಸಂಸ್ಕೃತಿಯ ಕವಿ ರಾಘವಾಂಕ ಕೃತಿಯ ಕುರಿತು ಮಾತನಾಡಿದರು. ಈ ವೇಳೆ ಪತ್ರಕರ್ತೆ ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







