16 ದಿನದ ಹಸುಳೆಯನ್ನು ಎತ್ತಿಕೊಂಡು ಹೋದ ಕೋತಿ!
ಮಗುವಿನ ಮೃತದೇಹ ಪತ್ತೆ
ಕಟಕ್, ಎ.1: ಮನೆಯಲ್ಲಿ ನಿದ್ರಿಸುತ್ತಿದ್ದ 16 ದಿನದ ಹಸುಳೆಯನ್ನು ಕೋತಿಯೊಂದು ಎತ್ತಿಕೊಂಡು ಹೋದ ಘಟನೆ ಇಲ್ಲಿಗ ಸಮೀಪದ ಬಂಕಿ ತಾಲೂಕಿನ ತಲಬಸ್ತ ಗ್ರಾಮದಲ್ಲಿ ನಡೆದಿದ್ದು, ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಮಗುವಿನ ಪತ್ತೆಗೆ ಸಮರೋಪಾದಿ ಕಾರ್ಯಾಚರಣೆ ಕೈಗೊಂಡರೂ ಮಗುವಿನ ಬಗ್ಗೆ ಇದುವರೆಗೆ ಯಾವ ಸುಳಿವೂ ಸಿಕ್ಕಿರಲಿಲ್ಲ.
ರಾಮಕೃಷ್ಣ ನಾಯಕ್ ಎಂಬವರು ತಮ್ಮ 16 ದಿನದ ಮಗುವಿನೊಂದಿಗೆ ಹಜಾರದಲ್ಲಿ ನಿದ್ರಿಸುತ್ತಿದ್ದರು. ಮುಂಜಾನೆ 6ರ ಸುಮಾರಿಗೆ ಕೋತಿಯೊಂದು ಮನೆಗೆ ನುಗ್ಗಿ, ಮಗುವನ್ನು ಎತ್ತಿಕೊಂಡು ಪರಾರಿಯಾಯಿತು. ಮನೆಕೆಲಸ ಮಾಡುತ್ತಿದ್ದ ನಾಯಕ್ ಅವರ ಪತ್ನಿ, ಮಗುವನ್ನು ಕೋತಿ ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಿದ್ದಾರೆ. ನೋಡನೋಡುತ್ತಿದ್ದಂತೆ ಕೋತಿ ಮಗುವಿನೊಂದಿಗೆ ನಾಪತ್ತೆಯಾಯಿತು. ಆಕೆಯ ಹೇಳಿಕೆಯ ಮೇರೆಗೆ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಕೋತಿಯನ್ನು ಪತ್ತೆ ಮಾಡಲು ಸ್ಥಳಕ್ಕೆ ಧಾವಿಸಿದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ವಿವರಿಸಿದ್ದಾರೆ.
ಸಾವಿನ ನಿಖರ ಕಾರಣ ತಿಳಿಯಲು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಂಕಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಹಿಳೆಯೊಬ್ಬರು ನೀರು ಸೇದಲು ಬಾವಿಯ ಸಮೀಪ ಹೋಗಿದ್ದಾಗ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಕೂಡಲೇ ಆಕೆ ಇತರರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.