ವಿಟ್ಲ: ಬಾವಿಗೆ ಇಳಿದಿದ್ದ ಬಾಲಕ ಮೃತ್ಯು

ಬಂಟ್ವಾಳ, ಎ.1: ಈಜಾಡಲೆಂದು ಬಾವಿಗೆ ಇಳಿದ ಇಬ್ಬರು ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಮುಡ್ನೂರು ಗ್ರಾಮದ ಕುಂಡಡ್ಕ ಪಿಲಿಂಜ ಎಂಬಲ್ಲಿ ರವಿವಾರ ಸಂಭವಿಸಿದೆ.
ವಿಟ್ಲದ ಮುಡ್ನೂರು ಗ್ರಾಮದ ಕುಂಡಡ್ಕ ಪಿಲಿಂಜ ನಿವಾಸಿ ದಕ್ಷಣ್ (15) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಶಾಲೆಗೆ ರಜೆಯಿದ್ದ ಕಾರಣ ರವಿವಾರ ಮೂವರು ಬಾಲಕರು ಸೇರಿ ಜೊತೆಯಾಗಿ ಆಟವಾಡಲೆಂದು ಮನೆ ಸಮೀಪದ ಬಾವಿ ಬಳಿ ತೆರಳಿದ್ದರು. ಬಳಿಕ ಇಬ್ಬರು ಬಾಲಕರು ನೀರಾಟಕ್ಕಾಗಿ ಬಾವಿಗೆ ಇಳಿದಿದ್ದರು ಎನ್ನಲಾಗಿದೆ.
ನೀರಾಟವಾಡುವ ಸಂದರ್ಭ ಇಬ್ಬರೂ ಕೂಡಾ ನೀರಿನಲ್ಲಿ ಮುಳುಗಲಾರಂಭಿಸಿದ್ದು, ಇದನ್ನು ಗಮನಿಸಿದ ಬಾವಿಕಟ್ಟೆ ಮೇಲಿದ್ದ ಮತ್ತೊಬ್ಬ ಬಾಲಕ ಸಹಾಯಕ್ಕಾಗಿ ಕಿರುಚಲಾರಂಭಿಸಿದ್ದಾನೆ. ತಕ್ಷಣ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಬಾವಿಗೆ ಇಳಿದು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ದಕ್ಷಣ್ ಅದಾಗಲೇ ಸಾವನಪ್ಪಿದ್ದು, ಮತ್ತೊರ್ವ ಬಾಲಕನನ್ನು ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







