ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ ; ಮೂವರು ಯೋಧರು ಹುತಾತ್ಮ, 11 ಉಗ್ರರ ಹತ್ಯೆ

ಶ್ರೀನಗರ, ಎ.1: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆ ರವಿವಾರ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 11ಉಗ್ರರನ್ನು ಹೊಡೆದುರುಳಿಸಿದೆ. ಉಗ್ರರು ಮತ್ತು ಯೋಧರ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ
ಇದೇ ವೇಳೆ ಶೋಪಿಯಾನ್ ಜಿಲ್ಲೆಯ ದ್ರಾಗಡ್ ನಲ್ಲಿ ಭದ್ರತಾ ಪಡೆ ಮತ್ತು ನಾಗರಿಕರ ನಡುವೆ ಸಂಭವಿಸಿದ ಹಿಂಸಾಚಾರದಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. 12ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಶೋಪಿಯಾನ್ ನಲ್ಲಿ ಭದ್ರತಾ ಪಡೆಗಳು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ದ್ರಾಗಡ್ ಮತ್ತು ಕಚೋದರಾ ಗ್ರಾಮದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾದರು.
ಕಚೋದರಾದಲ್ಲಿ ನಾಲ್ಕರಿಂದ ಐದು ಮಂದಿ ಉಗ್ರರು ಮನೆಯೊಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಭದ್ರತಾ ಪಡೆ ಅವರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದೇ ವೇಳೆ ಉಗ್ರರೊಂದಿಗೆ ಮನೆಯಲ್ಲಿ ಸಿಲುಕಿಕೊಂಡಿರುವ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಭದ್ರತಾ ಪಡೆ ಪ್ರಯತ್ನ ನಡೆಸಿದೆ ಅನಂತನಾಗ್ ಜಿಲ್ಲೆಯಲ್ಲಿ ಓರ್ವ ಉಗ್ರನನ್ನು ಕೊಲ್ಲಲಾಗಿದ್ದು, ಇನ್ನೊಬ್ಬನನ್ನು ಸೆರೆ ಹಿಡಿಯಲಾಗಿದೆ.
ದ್ರಾಗಡ್ ಮತ್ತು ಕಚೋದರಾ ದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ನಾಗರಿಕರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಇಬ್ಬರು ನಾಗರಿಗರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರು. 6 ಮಂದಿಗೆ ಗಂಭೀರ ಗಾಯವಾಗಿದೆ ಎಂದು ಡಿಎಸ್ ಪಿ ವಹೀದ್ ತಿಳಿಸಿದ್ದಾರೆ







