ಉಡುಪಿ: ವಲಸೆ ಕಾರ್ಮಿಕರಿಗೆ ಮತದಾನ ಕುರಿತು ಜಾಗೃತಿ

ಉಡುಪಿ, ಎ.1: ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಒಡ್ಡುವ ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೆ, ತಮಗೆ ಅರ್ಹ ಅನಿಸುವ ವ್ಯಕ್ತಿಗೆ ಮತದಾನ ಮಾಡಬೇಕು ಎಂದು ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ನಿಟ್ಟೂರಿನ ಮಹಾಬಲ ಶೆಟ್ಟಿ ಕಾಪೌಂಡ್‌ನಲ್ಲಿರುವ ವಲಸೆ ಕಾರ್ಮಿಕರ ಕಾಲೋನಿಗೆ ರವಿವಾರ ಭೇಟಿ ನೀಡಿ ಅಲ್ಲಿನ ಮತದಾರರಿಗೆ ಮತದಾನದ ಮಹತ್ವ ಕುರಿತು ಮಾಹಿತಿ ಹಾಗೂ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡುತಿದ್ದರು.
ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳ ಯಾವುದೇ ಆಸೆ, ಅಮಿಷ, ಬೆದರಿಕೆ ಗಳಿಗೆ ಮಣಿಯದೆ ನಿರ್ಭೀತಿಯಿಂದ ಮತ ಚಲಾಯಿಸಬೇಕು. ಮುಕ್ತ, ಪಾರ ದರ್ಶಕ, ನ್ಯಾಯ ಸಮ್ಮತ ಚುನಾವಣೆಗೆ ಯಾವುದೇ ಅಡೆ ತಡೆಗಳಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಟೋಲ್ ಫ್ರೀ ಸಂಖ್ಯೆ 1077ಗೆ ಮಾಹಿತಿ ನೀಡಬೇಕು ಎಂದರು. ವಿಕಲಚೇತನ ಮತದಾರರು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 0820- 2574811ಕ್ಕೆ ಮುಂಚಿತವಾಗಿ ಮಾಹಿತಿ ನೀಡಿದ್ದಲ್ಲಿ, ಮತದಾನದ ದಿನ ಅವರನ್ನು ಮತಕೇಂದ್ರಕ್ಕೆ ಕರೆದೊಯ್ದು, ಮತದಾನ ಮಾಡಿಸಿ ತಂದು ಬಿಡಲಾಗು ವುದು ಎಂದು ಅವರು ಹೇಳಿದರು.
ಜನವರಿ 1 ಕ್ಕೆ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಇನ್ನೂ ಅವಕಾಶವಿದ್ದು, ಕೂಡಲೇ ತಮ್ಮ ಹೆಸರು ಸೇರ್ಪಡೆ ಮಾಡಬೇಕು. ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರಿ ರುವವರು, ಸಮೀಪದ ಬಿಎಲ್‌ಓ ಅವನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರದ ಬಳಕೆ ಹಾಗೂ ವಿವಿ ಪ್ಯಾಟ್ ಬಳಕೆ ಮತ್ತು ಮಹತ್ವದ ಕುರಿತು ಅರಿವು ಮೂಡಿಸಿ, ಕರಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಜಿಲ್ಲಾ ವಿಕಲ ಚೇತನ ಇಲಾಖಾಧಿಕಾರಿ ನಿರಂಜನ್ ಭಟ್, ಶಿಕ್ಷಣಾಧಿಕಾರಿ ನಾಗೇಶ್ ಶಾನು ಬೋಗ್, ಶಿಕ್ಷಣ ಇಲಾಖೆಯ ಪರಿವೀಕ್ಷಕ ನಾಗರಾಜ್, ಪ್ರಶಾಂತ್ ಶೆಟ್ಟಿ ಹಾವಂಜೆ ಮೊದಲಾದವರು ಉಪಸ್ಥಿತರಿದ್ದರು.







