ಸಾಹಿತ್ಯ ಜನರಿಗೆ ಸ್ಫೂರ್ತಿ ನೀಡುವಲ್ಲಿ ವಿಫಲ: ನ್ಯಾ.ಎನ್.ಕುಮಾರ್
ಬೆಂಗಳೂರು, ಎ.1: ಇತ್ತೀಚಿನ ಕೆಲವು ಸಾಹಿತಿಗಳು ಸಾಹಿತ್ಯ ರಚನೆಯ ಬದಲಿಗೆ ತಮ್ಮಲ್ಲಿರುವ ವಿಷಯವನ್ನು ಕೇಂದ್ರೀಕರಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಕುಮಾರ್ ತಿಳಿಸಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಡಾ.ಬಾಬು ಕೃಷ್ಣಮೂರ್ತಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಡಾ.ಬಾಬು ಕೃಷ್ಣಮೂರ್ತಿಗೆ ಅಭಿನಂದನೆ ಹಾಗೂ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಸಾಹಿತ್ಯ ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ತಟಸ್ಥವಾಗಿದ್ದು, ಜನರಿಗೆ ಸ್ಪೂರ್ತಿ ನೀಡುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
19ನೆ ಶತಮಾನದಲ್ಲಿ ಕನ್ನಡ ಸಾಹಿತ್ಯ ಆರಂಭಗೊಂಡಿತು. ಆ ಸಂದರ್ಭದಲ್ಲಿ ಅದೊಂದು ಚಿನ್ನದ ಪರ್ವದಂತೆ ಉತ್ಕೃಷ್ಟವಾದ ಸಾಹಿತ್ಯವಾಗಿದೆ. ಆದರೆ, ಇಂದಿನ ಸಾಹಿತಿಗಳು ಮಾತನಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ ಎಂದ ಅವರು, ತ್ರಿಡಿ ಕಾಲಘಟ್ಟದಲ್ಲಿಯೂ ಸಂಶೋಧನೆ ಮೂಲಕ ಸತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಡಾ.ಬಾಬು ಕೃಷ್ಣಮೂರ್ತಿ ಅವರು ಅಪಾರವಾದ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಸಾಹಿತಿಗಳು ದೀರ್ಘವಾದ ಅಧ್ಯಯನ, ಸಂಶೋಧನೆ ಮಾಡುವ ಮೂಲಕ ನಮ್ಮ ಚರಿತ್ರೆ, ಇತಿಹಾಸವನ್ನು ನಮ್ಮ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ತಿಳಿಸುವ ಪ್ರಯತ್ನ ಮಾಡಬೇಕು. ಈ ಮೂಲಕ ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪುವಂತೆ ಮಾಡಬೇಕಿದೆ. ದೇಶಭಕ್ತಿ, ಸ್ವಾತಂತ್ರ ಸಂಗ್ರಾಮ, ನಿಜವಾದ ದೇಶ ಭಕ್ತರು ಯಾರು ಎಂದು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಅವರು ತಿಳಿಸಿದರು.
ನಮ್ಮ ದೇಶದ ಚರಿತ್ರೆಯನ್ನು ನಾಶ ಮಾಡಲಾಗಿದೆ. ಸ್ವಾತಂತ್ರ ಸಿಗುವುದಕ್ಕಿಂತಲೂ ಮೊದಲು ಬ್ರಿಟಿಷರು ನಮ್ಮನ್ನು ಹಿಂಸಿಸುತ್ತಿದ್ದರು. ಆದರೆ, ಸ್ವಾತಂತ್ರ ಸಿಕ್ಕಿದ ನಂತರ ಬ್ರಿಟಿಷರಿಗಿಂತಲೂ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ನಮಗೆ ರಾಜಕೀಯ ಸ್ವಾತಂತ್ರ ಸಿಕ್ಕಿದೆ ಹೊರತು ಬೇರೆ ಯಾವುದೇ ಸ್ವಾತಂತ್ರ ಸಿಕ್ಕಿಲ್ಲ ಎಂದ ಅವರು, ಬ್ರಿಟಿಷರು ಭಯ ಪಟ್ಟು ದೇಶದಿಂದ ಹೊರಹೋದರೆ, ನಮ್ಮವರು ಇಲ್ಲಿಂದ ಮುಂದಕ್ಕೆ ಕದಲುತ್ತಿಲ್ಲ. ಬ್ರಿಟಿಷರು ಮಾಡಿದ ಕೆಲವನ್ನೇ ಇಂದಿನ ರಾಜಕಾರಣಿಗಳು ಮುಂದುವರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ 50 ವರ್ಷಗಳಲ್ಲಾಗಿರುವ ನಷ್ಟವನ್ನು ಮುಂದಿನ 100 ವರ್ಷಗಳಾದರೂ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ದೇಶಕ್ಕಾಗಿ ಸಮಯ ಹಾಗೂ ಒಂದಿಷ್ಟು ಸಂಪಾದನೆ ಮೀಸಲಿಡಲು ಯಾರೂ ಹಿಂಜರಿಯಬಾರದು. ಅಲ್ಲದೆ, ಸ್ವಾತಂತ್ರಕ್ಕಾಗಿ ಪ್ರಾಣ, ಸಂಸಾರ, ಸಂಪತ್ತು ಸೇರಿದಂತೆ ಎಲ್ಲವನ್ನೂ ತ್ಯಾಗ ಮಾಡಿ ಹೋರಾಡಿದ ವೀರರನ್ನು ನೆನೆಯಬೇಕು ಎಂದು ಕುಮಾರ್ ಸಲಹೆ ನೀಡಿದರು.
ಮಾಜಿ ಶಾಸಕ ಕೃ.ನರಹರಿ ಮಾತನಾಡಿ, ಸಂಶೋಧನ ಕ್ಷಮತೆ, ಸೌಜನ್ಯ, ವಿನಯದ ಗುಣಗಳನ್ನು ಬಾಲ್ಯದಿಂದಲೂ ಕರಗತ ಮಾಡಿಕೊಂಡಿರುವ ಡಾ.ಬಾಬು ಕೃಷ್ಣಮೂರ್ತಿ ಅಪಾರದವಾದ ಹಾಗೂ ಅತಿ ಅಮೂಲ್ಯವಾದ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ನಮ್ಮ ದೇಶದ ಬಗ್ಗೆ ಅಭಿಮಾನವಿಲ್ಲದ ಜನರ ಕೈಗೆ ದೇಶದ ಇತಿಹಾಸ, ಸಂಸ್ಕೃತಿ, ಸಮಾಜಶಾಸ್ತ್ರ ಸಿಕ್ಕಿಬಿದ್ದಿದ್ದು, ಚರಿತ್ರೆಯನ್ನು ತಿಳಿಸಲು ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಡಾ.ಜಿ.ಬಿ.ಹರೀಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರೊ.ಎಸ್.ಲೀಲಾ ಹಾಗೂ ಲೇಖಕ ಡಾ.ಬಾಬು ಕೃಷ್ಣಮೂರ್ತಿ ಉಪಸ್ಥಿತರಿದ್ದರು.







