ದೇಶದ ಆರ್ಥಿಕ ವಿಚಾರದಲ್ಲಿ ಶಿಸ್ತು ಕ್ರಮ ಅಗತ್ಯ: ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಎ. 1: ಆರ್ಥಿಕತೆ ದೇಶದ ಬೆನ್ನಲೆಬು. ಹೀಗಾಗಿ, ದೇಶದ ಆರ್ಥಿಕ ವಿಚಾರಗಳಲ್ಲಿ ಶಿಸ್ತಿನ ಕ್ರಮ ಅಳವಡಿಸಿಕೊಂಡರೆ ಮಾತ್ರ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಬಿಜೆಪಿ ಸಣ್ಣ ಮತ್ತು ಮಧ್ಯಮ ಉದ್ಯೋಗ ಕೈಗಾರಿಕೆ ಪ್ರಕೋಷ್ಟ ಏರ್ಪಡಿಸಿದ್ಧ ‘ನವ ಕರ್ನಾಟಕ ಜನಪರ ಶಕ್ತಿ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆರ್ಥಿಕತೆಯಿಂದ ದೇಶವನ್ನು ಸಧೃಢಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಆರ್ಥಿಕಥೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ದೇಶದ ಅಭಿವೃದ್ಧಿಗಾಗಿ ಉತ್ತಮ ಆಡಳಿತ ನಡೆಸಿ, ಅಭಿವೃದ್ಧಿ ರಾಷ್ಟ್ರಗಳೊಂದಿಗೆ ಹೆಜ್ಜೆ ಹಾಕಲು ಪೂರ್ವ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ದೇಶದೆಲ್ಲಡೆ ಮೈಕ್ರೋ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಆರಂಭವಾಗಿದೆ ಎಂದ ಅವರು, ಪ್ರಧಾನಿ ಮೋದಿ ದೇಶದಲ್ಲಿ 436 ಸಾರ್ವಜನಿಕ ಸಭೆ ನಡೆಸಿ, ನಮಗೆ ಅಧಿಕಾರ ನೀಡಿದರೆ ನಾವು ಏನನ್ನು ಮಾಡಬಹುದು ಎನ್ನುವ ಕುರಿತಂತೆ ಮಾತ್ರ ಮಾತನಾಡಿದ್ದಾರೆ ಎಂದು ಅವರು ಹೇಳಿದರು.
ಆರ್ಥಿಕತೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗಾರಿಕಾ ವಲಯದ ಮುಖ್ಯಸ್ಥರು ನೀಡಿರುವ ಸಲಹೆಗಳನ್ನು ಸ್ವೀಕರಿಸಲಾಗಿದೆ. 118 ವಸ್ತುಗಳ ಉತ್ಪಾದನೆ ಕುರಿತಂತೆ ಇರುವ ಸಮಸ್ಯೆಗಳನ್ನು ಸರಿಪಡಿಸಲು ರಾಜ ನೀತಿಯಂತೆ ಕಾರ್ಯನಿರ್ವಹಿಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಅತಿಯಾದ ಕಾನೂನುಗಳನ್ನು ನಿಷೇಧಿಸಿ ಕಾನೂನು ಪುಸ್ತಕವನ್ನು ಸಂಕುಚಿತಗೊಳಿಸಬೇಕಿದೆ ಎಂದು ತಿಳಿಸಿದರು.
ಪ್ರಸ್ತುತ ಇರುವ 36 ನ್ಯಾಯಾಂಗ ವ್ಯವಸ್ಥೆಗಳನ್ನು 16 ಕ್ಕೆ ಇಳಿಸುವ ಕ್ರಮ ಹಾಗೂ ಕಾರ್ಮಿಕ ಇಲಾಖೆಯಲ್ಲಿರುವ 38 ಕಾರ್ಮಿಕ ಕಾನೂನುಗಳನ್ನು ನಿಷೇಧಿಸಿ ಕೇವಲ 9 ಕಾನೂನುಗಳನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ತಿಳಿಸಿದರು.
ಆದ್ಯತೆ ಆದಾರದ ಮೇಲೆ ಕೈಗಾರಿಕಾ ವಲಯದ ಸಮಸ್ಯೆಗಳ ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಆಡಳಿತ ಸುಧಾರಣೆಗಳನ್ನು ರಾಜ್ಯದಲ್ಲಿಯೂ ತರಬೇಕು ಎಂದ ಅವರು, ಕೃಷಿ ವಲಯವನ್ನು ಬಿಟ್ಟರೆ ಕೈಗಾರಿಕಾವಲಯದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಲು ಸಾಧ್ಯ ಎಂದು ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಕೋಷ್ಠ ರಾಜ್ಯ ಸಂಚಾಲಕ ಹಾಗೂ ಶಾಸಕ ಡಾ.ಅಶ್ವತ್ಥ್‌ನಾರಾಯಣ್, ಎಸ್.ಕೆ.ಸಿ.ಸಿ ಅಧ್ಯಕ್ಷ ರವಿ, ಪತ್ರಿಕಾಮತ್, ಉಮೇಶ್‌ಶರ್ಮ, ವಿಶ್ವನಾಥ್, ನರೇಂದ್ರ ಕುಲಕರ್ಣಿ, ಉದಯಕುಮಾರ್ ಶೆಟ್ಟಿ, ಸೇರಿದಂತೆ ಪ್ರಮುಖರಿದ್ದರು.







