ದತ್ತಾಂಶ ಕಳ್ಳತನ ತಡೆಯಲು ಭಾರತದಲ್ಲಿ ಸೂಕ್ತ ಕಾನೂನುಗಳಿಲ್ಲ: ತಜ್ಞರ ಅಭಿಮತ

ಹೊಸದಿಲ್ಲಿ,ಎ.1: ಚೀನಾದ ನಂತರ ಅತ್ಯಂತ ಹೆಚ್ಚಿನ ಅಂತರ್ಜಾಲ ಬಳಕೆದಾರರು ಇರುವುದು ಭಾರತದಲ್ಲಿ. ಇಲ್ಲಿ 462.12 ಮಿಲಿಯ ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ಆದರೂ ದೇಶವು ದತ್ತಾಂಶಗಳ ರಕ್ಷಣೆ ಮತ್ತು ಖಾಸಗಿತನವನ್ನು ಕಾಯ್ದುಕೊಳ್ಳಲು ಸೂಕ್ತ ಕಾನೂನಿನ ಚೌಕಟ್ಟಿನ ಕೊರತೆಯನ್ನೆದು ರಿಸುತ್ತಿದೆ. ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತಿರುವ ಅಂತರ್ಜಾಲ ಕ್ಷೇತ್ರವನ್ನು ನಿಯಂತ್ರಿಸುವಲ್ಲಿ ಸದ್ಯದ ಕಾನೂನುಗಳು ಸಮರ್ಥ ವಾಗಿಲ್ಲ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದತ್ತಾಂಶ ಸೋರಿಕೆಯು ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದ್ದರೆ, ಜನರು ಈಗ ತಮ್ಮ ಸಾಮಾಜಿಕ ಜಾಲತಾಣಗಳನ್ನು, ನಿರ್ದಿಷ್ಟವಾಗಿ ಫೇಸ್‌ಬುಕ್‌ನ್ನು ಪ್ರತಿದಿನ ಬ್ರೌಸ್ ಮಾಡುವ ತಮ್ಮ ಚಟವನ್ನು ಮರುಪರಿಶೀಲಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಬ್ರಿಟನ್‌ನ ಕೇಂಬ್ರಿಜ್ ಅನಲಿಟಿಕಾ(ಸಿಎ)ದ ಹಗರಣವು ಬಹಿರಂಗಗೊಳ್ಳುವುದ ರೊಂದಿಗೆ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಫೇಸ್ ಬುಕ್‌ನ 50 ಮಿಲಿಯ ಬಳಕೆದಾರರ ದತ್ತಾಂಶಗಳಿಗೆ ಕನ್ನ ಹಾಕಿದ್ದ ಅದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಬ್ರೆಕ್ಸಿಟ್ ಪರ ಅಭಿಯಾನದಲ್ಲಿ ಮತ್ತು ಇತರ ರಾಷ್ಟ್ರಗಳಲ್ಲಿಯ ಚುನಾವಣೆಗಳಲ್ಲಿ ಪ್ರಭಾವ ಬೀರಲು ಅವುಗಳನ್ನು ಬಳಸಿಕೊಂಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ.
ಜಾಗತಿಕವಾಗಿ ಚೀನಾದ ನಂತರ ಅತ್ಯಂತ ಹೆಚ್ಚು ಸಂಖ್ಯೆಯ ಅಂತರ್ಜಾಲ ಬಳಕೆದಾರರು ಭಾರತದಲ್ಲಿದ್ದಾರೆ. ಆದರೆ ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ,2000 ಮತ್ತು 2008 ಹಾಗೂ 2011ರಲ್ಲಿ ಅದಕ್ಕೆ ತರಲಾಗಿರುವ ತಿದ್ದುಪಡಿಗಳು ಸಾಮಾಜಿಕ ಮಾಧ್ಯಮಗಳು ಮತ್ತು ಅಂತರ್ಜಾಲ ಸಂಬಂಧಿತ ಅಪರಾಧಗಳನ್ನು ನಿಯಂತ್ರಿಸಲು ಅಷ್ಟೊಂದು ಸೂಕ್ತವಾಗಿಲ್ಲ ಎಂದು ಸೈಬರ್ ಭದ್ರತೆ ಸಂಸ್ಥೆ ಅರ್ನ್ಸ್ಟ್ ಆ್ಯಂಡ್ ಯಂಗ್‌ನ ಪಾಲುದಾರ ಜಸ್ಪ್ರೀತ್ ಸಿಂಗ್ ಹೇಳಿದರು.
ಚೀನಾದಲ್ಲಿ 738.5 ಮಿಲಿಯ ಜನರು ಅಂತರ್ಜಾಲವನ್ನು ಬಳಸುತ್ತಿದ್ದರೆ ಮೂರನೆಯ ಸ್ಥಾನದಲ್ಲಿರುವ ಅಮೆರಿಕದಲ್ಲಿ ಅವರ ಸಂಖ್ಯೆ 286.94ರಷ್ಟಿದೆ.
ದತ್ತಾಂಶಗಳ ಸೋರಿಕೆಯನ್ನು ತಡೆಯಲು ಮತ್ತು ಖಾಸಗಿತನವನ್ನು ರಕ್ಷಿಸಲೆಂದೇ ನಿರ್ದಿಷ್ಟವಾದ ಕಾನೂನು ಭಾರತದಲ್ಲಿಲ್ಲ ಎಂದು ಸಿಂಗ್ ತಿಳಿಸಿದರು.
ಮಾಹಿತಿ ತಂತ್ರಜ್ಞಾನ ಕಾಯ್ದೆಯು 10 ವರ್ಷಗಳಷ್ಟು ಹಳೆಯದಾಗಿರುವುದರಿಂದ ಸೈಬರ್ ಭದ್ರತೆಯನ್ನು ಕಾಯ್ದುಕೊಳ್ಳಲು ಅದು ಸರ್ವಶಕ್ತವಾಗಿದೆ ಎಂದು ನಿರೀಕ್ಷಿಸು ವುದು ತಪ್ಪಾಗುತ್ತದೆ ಎಂದು ಸೈಬರ್ ಕಾನೂನು ತಜ್ಞರೂ ಸರ್ವೋಚ್ಚ ನ್ಯಾಯಾಲಯದ ವಕೀಲರೂ ಆಗಿರುವ ಪವನ್ ದುಗ್ಗಲ್ ಹೇಳಿದರು.
ಸೈಬರ್ ಭದ್ರತೆಯಲ್ಲಿ ಬಹಳಷ್ಟು ಅಭಿವೃದ್ಧಿಗಳಾಗಿವೆ. ಅದರಂತೆ ಸೈಬರ್ ಭದ್ರತೆಯ ಉಲ್ಲಂಘನೆಯಲ್ಲಿಯೂ ಹೊಸಹೊಸ ತಂತ್ರಗಳು ಬಳಕೆಯಾಗುತ್ತಿವೆ. ಆದರೆ ನಮ್ಮ ಕಾನೂನು ಮಾತ್ರ ಎಲ್ಲಿತ್ತೋ ಅಲ್ಲಿಯೇ ಇದೆ ಎಂದರು.







