27 ವರ್ಷಗಳಿಂದ ಜೈಲಿನಲ್ಲಿರುವ ಸೈನಿಕ: ನ್ಯಾಯಕ್ಕಾಗಿ ಪತ್ನಿಯಿಂದ ಸುಪ್ರೀಂಗೆ ಮೊರೆ

ಹೊಸದಿಲ್ಲಿ, ಎ.1: ಇಬ್ಬರು ಸಹೋದ್ಯೋಗಿಗಳ ಹತ್ಯೆಯ ಆರೋಪದಲ್ಲಿ ಕೋರ್ಟ್ ಮಾರ್ಶಲ್‌ಗೆ ಒಳಗಾಗಿ ಯಾವುದೇ ಅಂತಿಮ ತೀರ್ಪು ಹೊರಬೀಳದೆ ಕಳೆದ 27 ವರ್ಷಗಳಿಂದ ಜೈಲಿನಲ್ಲಿರುವ ತನ್ನ ಸೈನಿಕ ಪತಿಗೆ ನ್ಯಾಯ ಒದಗಿಸುವಂತೆ ಕೋರಿ ಪತ್ನಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಘನ ನ್ಯಾಯಾಲಯವು ಆಕೆಯ ಅರ್ಜಿಯನ್ನು ಗಣನೆಗೆ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಜೈಲಿನಲ್ಲಿ ಬಂಧಿಯಾಗಿರುವ ಯೋಧ ಲಾನ್ಸ್ ನಾಯಕ್ ದೇವೇಂದ್ರ ನಾಥ್ ರೈಯವರ ಪತ್ನಿ ಮಿಥಿಲೇಶ್ ರೈ ಹಾಕಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವು ಈ ಕುರಿತು ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಭದ್ರತಾ ಸಚಿವಾಲಯ, ಸೇನಾ ಮುಖ್ಯಸ್ಥರು ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಈಗ ತಮ್ಮ 60ರ ಹರೆಯದಲ್ಲಿರುವ ರೈಗೆ 1991ರಲ್ಲಿ ಕೋರ್ಟ್ ಮಾರ್ಶಲ್‌ಗೆ ಒಳಪಡಿಸಲಾಗಿತ್ತು. ಕೇಂದ್ರವು ಅವರ ಮರಣ ದಂಡನೆ ಶಿಕ್ಷೆಯನ್ನು ದೃಢಪಡಿಸಿತ್ತು. ಶಿಕ್ಷೆಯನ್ನು ಪ್ರಶ್ನಿಸಿ ರೈ, 2000ನೇ ಇಸವಿಯಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಕೂಡಾ ಅವರ ಅಪರಾಧವನ್ನು ಎತ್ತಿಹಿಡಿದರೂ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಿತ್ತು. ಕೇಂದ್ರ ಸರಕಾರವು 2006ರ ಜನವರಿ 10ರಂದು ನ್ಯಾಯಾಲಯದ ತೀರ್ಪಿನ ವಿರುದ್ಧ ಮತ್ತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಶ್ರೇಷ್ಠ ನ್ಯಾಯಾಲಯ ಈ ಪ್ರಕರಣವನ್ನು ಮರಳಿ ಹೈಕೋರ್ಟ್‌ಗೆ ನೀಡಿ ಪುನರ್ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿತ್ತು. 2007ರ ಮೇ 8ರಂದು ಹೈಕೋರ್ಟ್ ರೈಯವರ ಮನವಿಯನ್ನು ತಳ್ಳಿಹಾಕಿತ್ತು. ಇದೀಗ ರೈಯವರ ಪತ್ನಿ ತನ್ನ ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಸುದೀರ್ಘ ಜೈಲುವಾಸದಿಂದ ತನ್ನ ಪತಿಯ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬಿದ್ದಿದೆ. ಕಳೆದ 27 ವರ್ಷಗಳಲ್ಲಿ ಒಂದು ಬಾರಿಯೂ ಕೂಡಾ ಅವರನ್ನು ಪೆರೋಲ್ ಅಥವಾ ಜಾಮೀನಿನಡಿ ಬಿಡುಗಡೆ ಮಾಡಲಾಗಿಲ್ಲ ಎಂದಾಕೆ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. 1991ರ ಜೂನ್ 15ರಂದು ನಡೆದ ಇಬ್ಬರು ಸೇನಾ ಜವಾನರ ಹತ್ಯೆಯಲ್ಲಿ ಲಾನ್ಸ್ ನಾಯಕ್ ರೈ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸೇನಾ ನ್ಯಾಯಾಲಯದಲ್ಲಿ ಅಪರಾದ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಮಾರ್ಶಲ್‌ಗೆ ಗುರಿಪಡಿಸಲಾಗಿತ್ತು.







