ಬಿಜೆಪಿ ಚಾರ್ಜ್‌ಶೀಟ್ ನಲ್ಲಿ ನಟ ಚೇತನ್, ಎ.ಕೆ.ಸುಬ್ಬಯ್ಯ, ಜಿಗ್ನೇಶ್ ಮೇವಾನಿಗೆ ನಕ್ಸಲ್ ಪಟ್ಟ !
ದಿಡ್ಡಳ್ಳಿ ಹೋರಾಟವನ್ನು ನಕ್ಸಲ್ ಹೋರಾಟವೆಂದು ಬಿಂಬಿಸುವ ಯತ್ನ: ಆರೋಪ

ಬೆಂಗಳೂರು, ಎ.1: ಭಾರತೀಯ ಜನತಾ ಪಾರ್ಟಿ ನಗರದಲ್ಲಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಪ್ರಗತಿಪರ ಹೋರಾಟಗಾರ ಹಾಗೂ ನಟ ಚೇತನ್, ವಿಚಾರವಾದಿ ಎ.ಕೆ.ಸುಬ್ಬಯ್ಯ ಹಾಗೂ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ನಕ್ಸಲ್ ಉಗ್ರವಾದ ಪ್ರೇರಿತ ಹೋರಾಟಗಾರರು ಎಂದು ಬಿಂಬಿಸಲಾಗಿದೆ.
ಕಾಂಗ್ರೆಸ್ ಸರಕಾರ ಪುನರ್ವಸತಿ ಹೆಸರಿನಲ್ಲಿ ಪರೋಕ್ಷವಾಗಿ ನಕ್ಸಲೀಯರಿಗೆ ಪ್ರೋತ್ಸಾಹ ನೀಡಿದ್ದು, 2016ರ ಕೊನೆಯ ಕೆಲವು ತಿಂಗಳುಗಳಲ್ಲಿ ಕೊಡಗು ಜಿಲ್ಲೆ ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ವಾಸಿಸಿರುವ ಆದಿವಾಸಿಗಳ ತೆರವು ಕಾರ್ಯಾಚರಣೆ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.
ಆದರೆ, ಪ್ರತಿಭಟನೆ ನಂತರ ನಡೆದ ತನಿಖೆಯಿಂದ ತಿಳಿದುಬಂದಿದ್ದು, ಸ್ಥಳೀಯರ ಅಸಹಕಾರದಿಂದ ಪಶ್ಚಿಮಘಟ್ಟಗಳಲ್ಲಿ ನೆಲೆ ಕಳೆದುಕೊಂಡ ನಕ್ಸಲ್ ಭಯೋತ್ಪಾದಕರಿಗೆ ಕೊಡಗಿನ ಭಾಗಗಳಲ್ಲಿ ನೆಲೆಯೂರಲು ಇಲ್ಲಿನ ಜನರನ್ನು ಬಳಕೆ ಮಾಡಿಕೊಳ್ಳಲಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಪ್ರಸ್ಥಾಪಿಸಲಾಗಿದೆ.
ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅದೊಂದು ನಕ್ಸಲ್ ಪ್ರೇರಿತ ಹೋರಾಟ ಎಂದು ಸ್ಪಷ್ಟಪಡಿಸಿದ್ದರು ಎಂದಿದ್ದು, ಕಾಂಗ್ರೆಸ್‌ನ ಎ.ಕೆ.ಸುಬ್ಬಯ್ಯ, ಶಾಸಕ ಜಿಗ್ನೇಶ್ ಮೇವಾನಿ ಹಾಗೂ ನಟ ಚೇತನ್ ಅದರ ರೂವಾರಿಗಳು ಎಂದು ಆರೋಪಿಸಲಾಗಿದೆ.
ದಿಡ್ಡಳ್ಳಿ ಆದಿವಾಸಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಾಗೂ ಅವರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಬಿಜೆಪಿ ಪ್ರಕಟಿಸಿರುವ ಚಾರ್ಜ್‌ಶೀಟ್‌ನಲ್ಲಿ ಇಡೀ ಹೋರಾಟವನ್ನು ನಕ್ಸಲ್ ಹೋರಾಟ ಎಂದು ಬಿಂಬಿಸುವ ಮೂಲಕ ಸಮಾಜಕ್ಕೆ ಯಾವ ಸಂದೇಶ ನೀಡಲು ಮುಂದಾಗಿದೆ ಎಂದು ಪ್ರಗತಿಪರರು ಪ್ರಶ್ನಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ.







