ಶಿವಮೊಗ್ಗ: ಕಾರು ಅಪಘಾತ; ಚಾಲಕ ಮೃತ್ಯು, ಮೂವರಿಗೆ ಗಾಯ

ಶಿವಮೊಗ್ಗ, ಏ. 1: ಚಾಲನೆಯ ನಿಯಂತ್ರಣ ಕಳೆದುಕೊಂಡು ಕಾರೊಂದು ಪಲ್ಟಿಯಾಗಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟು, ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಮಂಡಘಟ್ಟ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ನಿವಾಸಿ, ಗೋಲ್ಡ್ ಸ್ಮಿತ್ ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ (40) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರ ಪತ್ನಿ ಸೌಮ್ಯ (26), ಮಕ್ಕಳದಾ ನಾಗಶ್ರೀ (8) ಹಾಗೂ ನಂದೀಶ್ (6) ರವರು ಗಾಯಗೊಂಡಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಹಿನ್ನೆಲೆ: ರಾಘವೇಂದ್ರ ರವರು ತಮ್ಮ ಕುಟುಂಬ ಸದಸ್ಯರ ಜೊತೆ ತಾವೇ ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಹೊಸನಗರ ತಾಲೂಕಿನಲ್ಲಿರುವ ತಮ್ಮ ಊರಿಗೆ ತೆರಳುತ್ತಿದ್ದರು. ಈ ವೇಳೆ ಮಂಡಘಟ್ಟದ ಸಮೀಪ ರಸ್ತೆಯ ತಿರುವಿನಲ್ಲಿ ಚಾಲನೆಯ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಕಾರು ಪಲ್ಟಿಯಾಗಿ ಬಿದ್ದಿದೆ. ತಕ್ಷಣವೇ ಸಾರ್ವಜನಿಕರು ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರರವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಅತೀ ವೇಗ, ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







