ದಲಿತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು,ಏ.1: ದಲಿತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಅವರ ಪಕ್ಷದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆಯಿಂದ ದಲಿತರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಟಿ.ಕೆ.ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.ಮೊನ್ನೆ ಮೈಸೂರಿನಲ್ಲಿ ಅಮಿತ್ ಶಾ ವಿರುದ್ಧ ದಲಿತರು ತಿರುಗಿ ಬೀಳಲು ಅನಂತಕುಮಾರ್ ಹೆಗಡೆ ಯನ್ನು ಸಮರ್ಥಿಸಿಕೊಂಡಿರುವುದೇ ಕಾರಣ. ಅವರ ಪಕ್ಷದವರೇ ದಲಿತ ಮುಖಂಡರುಗಳನ್ನು ಆಹ್ವಾನಿಸಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಅವರು ಹೋಗಿದ್ದಾರೆ. ಅಮಿತ್ ಶಾ ಮಾತಿನಿಂದ ಕೆರಳಿದ ಅವರು ತಿರುಗಿ ಬಿದ್ದಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಅಮಿತ್ ಶಾ ಮೂರು ದಿನ ಅಲ್ಲ, ಪ್ರತಿನಿತ್ಯ ರಾಜ್ಯ ತಿರುಗಿದರೂ ಅವರ ಯೋಗ್ಯತೆ ಜನರಿಗೆ ಗೊತ್ತು. ಕೋಮುವಾದದಿಂದ ರಾಜ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್‍ನ ಎಟಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಯಾರ್ಯಾರಿಗೆ ಎಟಿಎಂ ಅಂತಾ ಜನರಿಗೆ ಗೊತ್ತಿದೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವವರು ಬೇರೆ ಏನು ಹೇಳಲು ಸಾಧ್ಯ ಎಂದರು.
ಜೆಡಿಎಸ್ ಪಕ್ಷಕ್ಕೆ ವೋಟ್ ಹಾಕಿದರೆ ಅದು ತಿರುಗಿ ಕಾಂಗ್ರೆಸ್‍ಗೆ ಹಾಕಿದಂತೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಜೆಡಿಎಸ್‍ಗೆ ಮತ ನೀಡಿದರೆ ಬಿಜೆಪಿಗೆ ಹಾಕಿದಂತೆ. ಕೋಮುವಾದಿ ಪಕ್ಷಕ್ಕೆ ಬೆಂಬಲಿಸಿದಂತೆ. ಸ್ವಂತ ಶಕ್ತಿ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹರತಾಳು ಹಾಲಪ್ಪ ಮೇಲಿದ್ದ ಎಲ್ಲಾ ಕೋರ್ಟ್ ಕೇಸ್ ಖುಲಾಸೆ ಆಗಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಹೋದರೆ ಬಿಜೆಪಿಯಲ್ಲಿರುವ ನಾಯಕರು ಏನು ಮಾಡುತ್ತಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರೆಸಾರ್ಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಹಂಚುತಿದ್ದಾರೆ ಎಂಬ ಹೇಳಿಕೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ರೆಸಾರ್ಟ್ ರಾಜಕೀಯ ಮಾಡುವುದು ಚೆನ್ನಾಗಿ ಗೊತ್ತು. ನಾನು ರೆಸಾರ್ಟ್‍ಗೆ ಯಾರನ್ನು ಕರೆದು ದುಡ್ಡು ಕೊಟ್ಟಿಲ್ಲ. ಹಣವೂ ನನ್ನ ಬಳಿ ಇಲ್ಲ. ನಮ್ಮ ಮನೆಯ ಎಲ್ಲಾ ಕಿಟಕಿ ಬಾಗಿಲು ತೆರೆದಿವೆ. ಅದರಲ್ಲಿ ಎಲ್ಲಿ ಬರುತ್ತೆ ಬಂಡಲ್? ಗುಪ್ತ ವ್ಯವಹಾರ ಎಲ್ಲಾ ಜೆಡಿಎಸ್ ನವರಿಗೆ ಬಿಟ್ಟಿದ್ದು. ನನ್ನದೂ ಏನಿದ್ದರೂ ಪಾರದರ್ಶಕ. ಜೆಡಿಎಸ್ ಪಕ್ಷ ಹಿಂಬಾಗಿಲಿನಿಂದ ಬಿಜೆಪಿ ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ರೆಸಾರ್ಟ್ ರಾಜಕೀಯ ಜೆಡಿಎಸ್ ಪಕ್ಷದವರಿಗೆ ಮಾತ್ರ ಸೀಮಿತ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಎ.12 ರ ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಎಲ್ಲಾ ಕಡೆ ನಮಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕದ ವಿಧಾನಸಭಾ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ದಕ್ಷಿಣ ರಾಜ್ಯಗಳ ಮುಖಾಂತರವೇ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕಳೆ ಎರಡು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ, ಪಾದಯಾತ್ರೆ ಮೂಲಕ ಮತಬೇಟೆಗೆ ಇಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರ ಅಭಿಮಾನಿಗಳು 750 ಕೆ.ಜಿ. ತೂಕದ ಸೇಬಿನ ಹಾರವನ್ನು ಹಾಕಿದರು. ಸಿದ್ದರಾಮಯ್ಯ ಅಭಿಮಾನಿ ಬಳಗದ ದೇಸಿಗೌಡ ಅವರ ನೇತೃತ್ವದಲ್ಲಿ ಕೂರ್ಗಳ್ಳಿ ಗ್ರಾಮದಲ್ಲಿ ಈ ಹಾರ ಹಾಕುವ ಮೂಲಕ ಸಿದ್ದರಾಮಯ್ಯ ಅವರ ಗೆಲುವಿಗೆ ಬೆಂಬಲ ಸೂಚಿಸಿದರು. ಸುಮಾರು 750 ಕೆ.ಜಿ ತೂಕದ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕಲಾಯಿತು.







