ಮರಣ ದಂಡನೆಗೊಳಗಾದವರ ಹಕ್ಕುಗಳ ಉಲ್ಲಂಘನೆ: 10 ರಾಜ್ಯಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ.1: ಮರಣ ದಂಡನೆ ಶಿಕ್ಷೆಗೊಳಗಾದ ಕೈದಿಗಳ ಮಾನವ ಹಕ್ಕುಗಳ ಉಲ್ಲಂಘನೆ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಹತ್ತು ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಪ್ರತಿಕ್ರಿಯೆಯನ್ನು ಕೋರಿದೆ.
ಮರಣ ದಂಡನೆಗೊಳಗಾದ ಕೈದಿಗಳ ಏಕಾಂಗಿ ಬಂಧನ, ಕಾನೂನು ಪ್ರಾತಿನಿಧ್ಯ, ಕೈದಿಗಳ ಕುಟುಂಬಸ್ಥರ ಭೇಟಿಯಾಗುವ ಹಕ್ಕು ಮತ್ತು ಮನಃಶಾಸ್ತ್ರಜ್ಞರ ಸಲಹೆ ಪಡೆಯುವ ಹಕ್ಕು ಮುಂತಾದ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಡಿಜಿಪಿಗಳಿಗೆ ಸೂಚಿಸಿದೆ. ಕೈದಿಗಳ ಮಾನವ ಹಕ್ಕುಗಳು ಮತ್ತು ಕಾರಾಗೃಹ ಕೈಪಿಡಿಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಸರ್ವೋಚ್ಚ ನ್ಯಾಯಾಲಯದ ಸಲಹೆಗಾರ ನ್ಯಾಯವಾದಿ ಗೌರವ್ ಅಗರ್ವಾಲ್ ಅವರ ಪತ್ರಕ್ಕೆ ಉತ್ತರ ನೀಡುವಂತೆ ನ್ಯಾಯಾಧೀಶ ಎಂ.ಬಿ ಲೊಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠವು ಡಿಜಿಪಿಗಳಿಗೆ ಸೂಚಿಸಿದೆ. ಹತ್ತು ರಾಜ್ಯಗಳಾದ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್, ದಿಲ್ಲಿ, ಗೋವಾ, ಮಧ್ಯಪ್ರದೇಶ, ಅಸ್ಸಾಂ ಮತ್ತು ಬಿಹಾರದ ಡಿಜಿಪಿಗಳಿಗೆ ಈ ಸೂಚನೆ ನೀಡಲಾಗಿದ್ದು ಮೇ 8ರ ಒಳಗೆ ಉತ್ತರ ನೀಡುವಂತೆ ತಿಳಿಸಲಾಗಿದೆ. ದೇಶದ ಜೈಲುಗಳಲ್ಲಿ ಮಿತಿಗಿಂತ ಹೆಚ್ಚು ಕೈದಿಗಳನ್ನು ಹಾಕಲಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶ್ರೇಷ್ಠ ನ್ಯಾಯಾಲಯವು ಕೈದಿಗಳಿಗೂ ಮಾನವ ಹಕ್ಕುಗಳು ಇವೆ ಮತ್ತು ಅವರನ್ನು ಪ್ರಾಣಿಗಳಂತೆ ಇಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಪರಿಸ್ಥಿತಿಯನ್ನು ದುರದೃಷ್ಟಕರ ಎಂದು ವ್ಯಾಖ್ಯಾನಿಸಿರುವ ಘನ ನ್ಯಾಯಾಲಯವು, ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತಗಳಿಗೆ ಕೈದಿಗಳ ಮಾನವಹಕ್ಕುಗಳ ಬಗ್ಗೆ ಇರುವ ಬದ್ಧತೆಯ ಕೊರತೆಯೇ ಈ ಸ್ಥಿತಿಗೆ ಕಾರಣ ಎಂದು ದೂರಿದೆ.





