ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಎಚ್.ಡಿ ದೇವೇಗೌಡ
ಜೆಡಿಎಸ್ ರೈತ ಚೈತನ್ಯ ಸಮಾವೇಶ

ಮಂಡ್ಯ, ಎ.1: ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಪಾಂಡವಪುರದಲ್ಲಿ ರವಿವಾರ ನಡೆದ ಜೆಡಿಎಸ್ ರೈತ ಚೈತನ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಗರಡಿಯಲ್ಲಿ ಪಳಗಿದ ಸಿಎಂ ಸಿದ್ದರಾಮಯ್ಯ ಅವರಿಂದ ಜೆಡಿಎಸ್ ಮುಗಿಸಲು ಸಾಧ್ಯವಾಗದು ಎಂದು ಸವಾಲು ಹಾಕಿದರು. ನಾನೊಬ್ಬ ರೈತನ ಮಗ. ನನ್ನ ಜನರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ನಾನು ಬದುಕಿರುವರೆಗೂ ಹೋರಾಟ ಮುಂದುವರೆಸುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ತರುತ್ತೇನೆ ಎಂದು ಅವರು ಹೇಳಿಕೊಂಡರು.
ಜೆಡಿಎಸ್ ಸಂಘ ಪರಿವಾರ ಎನ್ನುವ ರಾಹುಲ್ ಹಾಗೂ ಸಿದ್ದರಾಮಯ್ಯನಿಂದ ನಾನು ಪಾಠ ಕಲಿಯಬೇಕಿಲ್ಲ. ಧರ್ಮಸಿಂಗ್ ಸರಕಾರದಲ್ಲಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಬಿ ಟೀಂ ಆಗಿರಲಿಲ್ವೆ ಎಂದು ಅವರು ವ್ಯಂಗ್ಯವಾಡಿದರು.
ನಮ್ಮ ರೈತರು ಯಾವತ್ತೂ ಹಸಿದು ಬಂದು ಅನ್ನ ಕೇಳಿಲ್ಲ. ನಿಮ್ಮ ಇಂದಿರಾ ಕ್ಯಾಂಟಿನ್ ಭಾಗ್ಯ ಯಾರಿಗೆ ಬೇಕು. ರೈತರ ಬೆಳೆಗೆ ನೀರು ಕೊಟ್ಟರೆ ಸಾಕು, ನಮ್ಮ ರೈತರು ಚಿನ್ನ ತೆಗಿತಾರೆ ಎಂದು ಅವರು ಹೇಳಿದರು.
ಜಿಲ್ಲೆಗೆ ನಾಯಕತ್ವದ ಅಗತ್ಯದಿಂದಾಗಿ ಪುಟ್ಟರಾಜುವನ್ನು ಸಂಸದ ಸ್ಥಾನದಿಂದ ಶಾಸಕ ಸ್ಥಾನಕ್ಕೆ ಕರೆ ತರುತ್ತಿದ್ದೇನೆ. ಜಿಲ್ಲೆಯ ಏಳು ಸ್ಥಾನಗಳನ್ನೂ ಜೆಡಿಎಸ್ ಗೆಲ್ಲಲಿದೆ. ಕಾಂಗ್ರೆಸ್ ಸೇರಿದಂತೆ ನಮ್ಮನ್ನು ಎದುರಿಸೋರಿಗೆ ಸರಿಸಮಾನವಾದ ವ್ಯಕ್ತಿಯನ್ನು ನಾಳೆ ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇನೆ ಎಂದು ದೇವೇಗೌಡರು ತಿಳಿಸಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ರೈತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪರ ಎನ್ನುವ ಸಿದ್ದರಾಮಯ್ಯ ಈ ವರ್ಗಗಳಿಗೆ ಕೊಟ್ಟಿರುವ ಕೊಡುಗೆ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬಿಎಸ್ಪಿಯ ಎನ್.ಮಹೇಶ್ ಮಾತನಾಡಿ, ಈ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ತಮ್ಮ ಪಕ್ಷವು 50 ರಿಂದ 60 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರಕಾರಗಳು ರೈತರನ್ನು ಬೀದಿಗೆ ತಳ್ಳಿವೆ. ಹೊಸ ದಿಕ್ಕು ನೀಡುವ ಈ ಚುನಾವಣೆಯಲ್ಲಿ 1977ರ ಇತಿಹಾಸ ಮರುಕಳಿಸಲಿದೆ ಎಂದು ಅವರು ಹೇಳಿದರು.
ಸಂಸದರಾದ ಸಿ.ಎಸ್.ಪುಟ್ಟರಾಜು, ಕುಪೇಂದ್ರರೆಡ್ಡಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಲಕ್ಷ್ಮೀಅಶ್ವಿನ್‍ಗೌಡ, ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಪ್ರಭಾವತಿ ಜಯರಾಂ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಇತರ ಮುಖಂಡರು ಹಾಜರಿದ್ದರು.
ಕೆ.ಅರ್.ಪೇಟೆ ಕಾರ್ಯಕರ್ತರ ಮಾತಿನ ಚಕಮಕಿ
ಪಾಂಡವಪುರದಲ್ಲಿ ನಡೆದ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಕೆ.ಆರ್.ಪೇಟೆ ಜೆಡಿಎಸ್ ಟಿಕೆಟ್ ವಿಚಾರವಾಗಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆ.ಆರ್.ಪೇಟೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದೆಂದು ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು ಅಭಿಮಾನಿಗಳು ದೇವೇಗೌಡರನ್ನು ಒತ್ತಾಯಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಕೆ.ಸಿ.ನಾರಾಯಣಗೌಡ ದೇವರಾಜುಗೆ ಟಿಕೆಟ್ ನೀಡಿದರೆ ಎಷ್ಟು ಖರ್ಚು ಮಾಡಲು ಸಿದ್ದರಿದ್ದೀರಿ ಎಂದು ಪ್ರಶ್ನಿಸಿದರು. ಆಗ ಗದ್ದಲ, ಮಾತಿನ ಚಕಮಕಿ ಶುರುವಾಯಿತು.
ಅಷ್ಟರಲ್ಲಿ ದೇವೇಗೌಡರು ಅಲ್ಲಿಂದ ನಿರ್ಗಮಿಸಿದರು. ಮೊಬೈಲ್ ಮೂಲಕ ಮಾಧ್ಯಮದವರು ಚಿತ್ರೀಕರಿಸಲು ಮುಂದಾದಾಗ ಜಗಳವಾಡುತ್ತಿದ್ದವರೂ ಜಾಗ ಖಾಲಿ ಮಾಡಿದರು.







