ಮೂಡಿಗೆರೆ: ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾಗಿ ಎ.ಸಿ.ಅಯೂಬ್ ಹಾಜಿ ನೇಮಕ

ಮೂಡಿಗೆರೆ, ಏ.1: ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದು ವಿಕಾಸಪರ್ವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದ ಪಲ್ಗುಣಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಸಿ.ಅಯೂಬ್ ಹಾಜಿ ಅವರನ್ನು ಶಾಸಕ ಬಿ.ಬಿ.ನಿಂಗಯ್ಯ ಅವರ ಶಿಫಾರಸ್ಸಿನಂತೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ತಿಳಿಸಿದ್ದಾರೆ.
ಭಾನುವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಅವಿರತವಾಗಿ ದುಡಿದಿದ್ದ ಅಯೂಬ್ ಹಾಜಿ ಅವರನ್ನು ಕಾಂಗ್ರೆಸ್‍ನ ಚಕಮಕ್ಕಿ ಬೂತ್ ಮಟ್ಟಕ್ಕೆ ಮಾತ್ರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಮುಸ್ಲಿಂ ವರ್ಗದವರೆಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಯಾವುದೇ ಉನ್ನತ ಹುದ್ದೆ ನೀಡಿರಲಿಲ್ಲ. ಆ ಪಕ್ಷದಲ್ಲಿ ಹೀನಾಯವಾಗಿ ನಡೆಸಿಕೊಂಡಿದ್ದರಿಂದ ಬೇಸರಗೊಂಡಿದ್ದ ಅಯೂಬ್ ಹಾಜಿ ಅವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಅಲ್ಪಸಂಖ್ಯಾತ ಹಿರಿಯ ನಾಯಕರೊಬ್ಬರ ಸೇರ್ಪಡೆಯಿಂದ ಪಕ್ಷದಲ್ಲಿ ಹುರುಪು ಹೆಚ್ಚಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಲಿರುವ ಬಿ.ಬಿ.ನಿಂಗಯ್ಯ ಅವರ ಗೆಲುವು ಖಚಿತವಾಗಿದೆ. ಅಲ್ಲದೆ ಜಿಲ್ಲೆಯಲ್ಲಿ 5 ಸ್ಥಾನವನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.





