ಮೂಡಿಗೆರೆ: ಇನ್ನೂ ಪೂರ್ತಿಯಾಗದ ಮೋರಿ ಕಾಮಗಾರಿ; ಸಾರ್ವಜನಿಕರಿಂದ ಆಕ್ರೋಶ

ಮೂಡಿಗೆರೆ, ಏ.1: ಇಲ್ಲಿನ ಪಟ್ಟಣ ಪಂಚಾಯತ್ ಅನುದಾನದಲ್ಲಿ ಕಳೆದ ಮೂರು ತಿಂಗಳ ಹಿಂದೆ ಪಟ್ಟಣದ ರಸ್ತೆಯೊಂದಕ್ಕೆ ಅಡ್ಡಲಾಗಿ ಮೋರಿಯೊಂದನ್ನು ನಿರ್ಮಿಸಲು ಮುಂದಾಗಿದ್ದು, 3 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ ವಾಹನ ಸವಾರರಿಗೆ ತೀವ್ರ ರೀತಿಯಲ್ಲಿ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಪಟ್ಟಣದ ಮಾರ್ಕೇಟ್ ರಸ್ತೆಯಲ್ಲಿ ಹಿಂದೆ ಇದ್ದ ಒಳ್ಳೆಯ ಮೋರಿಯನ್ನು ತೆರವುಗೊಳಿಸಿ ಹೊಸ ಮೋರಿ ನಿರ್ಮಾಣಕ್ಕೆ ಪಟ್ಟಣ ಪಂಚಾಯತ್ ಮುಂದಾಗಿದ್ದು, ಈ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಪಟ್ಟಣದ ಹೃದಯ ಭಾಗವಾದ ಎಂ.ಜಿ.ರಸ್ತೆ ಕೊನೆಯಲ್ಲಿರುವ ಮಾರ್ಕೇಟ್ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ವಾಹನಗಳ ಚಾಲಕರು ಮೋರಿ ನಿರ್ಮಾಣದ ಬಗ್ಗೆ ಅರಿವಿಲ್ಲದೇ ಈ ರಸ್ತೆ ಮೂಲಕ ಬಂದು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ವಾಹನವನ್ನು ತಿರುಗಿಸಲು ಸಾಧ್ಯವಾಗದೇ ಹಿಮ್ಮಖವಾಗಿಯೇ ಆಧಿಶಕ್ತಿ ದೇವಸ್ಥಾನದವರೆಗೆ ಚಲಿಸುವ ಪರಿಸ್ಥಿತಿ ಉಂಟಾಗಿದೆ. ಮೋರಿಯ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ವಾಹನ ಚಾಲಕರಿಗೆ ತಿಳಿಸುವ ನಾಮಪಲಕ ಹಾಕುವ ಕನಿಷ್ಟ ಪ್ರಜ್ಞೆಯು ಇಲ್ಲಿನ ಪ.ಪಂ.ಗೆ ಇಲ್ಲವಾಗಿದೆ. ಪಟ್ಟಣದ ಎಲ್ಲಾ ರಸ್ತೆಯನ್ನು ನಗರತ್ಥಾನದ ಅನುದಾನ ಬಳಸಿ ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ.
ಹೊಸದಾಗಿ ಕಾಂಕ್ರೀಟ್‍ನಿಂದ ನಿರ್ಮಿಸಿರುವ ಪಟ್ಟಣದ ರಸ್ತೆಯನ್ನು ಹಿಂದಿನ ಕಾಲದ ಎತ್ತಿನ ಗಾಡಿ ರಸ್ತೆಯಷ್ಟೆ ಅಗಲ ಮಾಡಲಾಗಿದೆ. ಹಾಗಾಗಿ ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಡಲು ಸಾಧ್ಯವಾಗದಂತಾಗಿದೆ. ಅತ್ಯಂತ ಕಿರಿದಾದ ರಸ್ತೆ ನಿರ್ಮಾಣದಿಂದ ಪ್ರತಿನಿತ್ಯ ಬೆಳೆಯುತ್ತಿರುವ ಮೂಡಿಗೆರೆ ಪಟ್ಟಣದಲ್ಲಿ ವಾಹನಗಳ ದಟ್ಟಣೆಯಂತೂ ದುಪ್ಪಟವಾಗುತ್ತಿದೆ. ಪಟ್ಟಣ ಪಂಚಾಯತ್ ನಿಂದ ಪುರಸಭೆ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಬಗ್ಗೆಯೂ ಸ್ಥಳೀಯ ಜನಪ್ರತಿನಿಧಿಗಳು ಆಗಾಗ ಭಾಷಣದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಸ್ತೆಗಳನ್ನು ಮಾತ್ರ ಮೇಲ್ದರ್ಜೆಗೇರಿಸುವ ಬಗ್ಗೆ ಮುಂದಾಲೋಚನೆ ಮಾಡದಿರುವುದು ವಾಹನ ದಟ್ಟಣೆಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಲ್ಲದೆ ಪಟ್ಟಣದ ತುಂಬೆಲ್ಲಾ ರಸ್ತೆ ಬದಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಕಳೆದ 2 ತಿಂಗಳಿಂದ ಉರಿಯುತ್ತಿಲ್ಲ. ಪಟ್ಟಣದ ತತ್ಕೋಳ ರಸ್ತೆ, ಜೆ.ಎಂ.ರಸ್ತೆ, ಎಂ.ಜಿ.ರಸ್ತೆ, ಕೆ.ಎಂ.ರಸ್ತೆ,ಮಾರ್ಕೇಟ್ ರಸ್ತೆ, ಛತ್ರಮೈಧಾನ, ದೊಡ್ಡಿಬೀದಿ, ಗಂಗನಮಕ್ಕಿ ಸಹಿತ ಯಾವುದೇ ಭಾಗದಲ್ಲಿಯೂ ಬೀದಿ ದೀಪ ಉರಿಯುತ್ತಿಲ್ಲ. ಈ ಬಗ್ಗೆ ಪ.ಪಂ. ಅಧಿಕಾರಿಗಳಿಗೆ ತಿಳಿಸಿದರೆ, ತಾರನಾಥ್ ಎಂಬುವರಿಗೆ ಬೀದಿ ದೀಪ ದುರಸ್ಥಿಗಾಗಿ ಗುತ್ತಿಗೆ ವಹಿಸಲಾಗಿದೆ. ಅವರು ಸರಿಪಡಿಸಿಲ್ಲ. ಅವರಿಗೆ ತಿಳಿಸಿ, ಸಧ್ಯದಲ್ಲೇ ಸರಿಪಡಿಸುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಹಾಗಾಗಿ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಗಮನಹರಿಸಿ ಪರಿಹಾರ ಒದಗಿಸಬೇಕಾಗಿ ಪಟ್ಟಣದ ನಿವಾಸಿಗಳ ಒತ್ತಾಯವಾಗಿದೆ.







