ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಜ್ ಕೌನ್ಸಿಲ್ ?
.jpg)
ಭಟ್ಕಳ, ಎ.1: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಸೌದಿ ಅರೆಬಿಯಾದ ಜಿದ್ದಾದಲ್ಲಿ ನಡೆದ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೆನರಾ ಖಲೀಜ್ ಕೌನ್ಸಿಲ್‌ನ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ಹೇಳಿದ್ದಾರೆ ಎಂದು ಸ್ಥಳೀಯ ಉರ್ದು ಜಾಲತಾಣ ವರದಿ ಮಾಡಿದೆ.
ಕೆನರಾ ಖಲೀಜ್ ಕೌನ್ಸಿಲ್ ಕರಾವಳಿಯ ಶರಾವತಿ ನದಿ ತೀರದ ಭಟ್ಕಳ, ಮುರುಡೇಶ್ವರ, ಮಂಕಿ, ವಲ್ಕಿ, ಕುರ್ವಾ, ಹೊನ್ನಾವರ, ಸಂಶಿ, ಉಪ್ಪಾಣಿ, ಹೇರಾಂಗಡಿ, ಗೇರುಸೊಪ್ಪಾ, ಗಂಗೋಳಿ, ಶಿರೂರು, ಬೈಂದೂರು ಭಾಗದ 29ಕ್ಕೂ ಹೆಚ್ಚು ಜಮಾಅತ್‌ಗಳನ್ನು ಒಳಗೊಂಡಿರುವ ಒಕ್ಕೂಟವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವು ಇದೆ ಎಂದು ಪರಿಗಣಿಸಿರುವ ಕೆನರಾ ಕೌನ್ಸಿಲ್ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಣಯ ಕೈಗೊಂಡಿದೆ. ಆದರೆ, ಅದಕ್ಕೂ ಮುನ್ನ ಭಟ್ಕಳದ ತಂಝೀಮ್ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಮುಸ್ಲಿಮ್ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರವನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದ್ದಾರೆ.
ಕೌನ್ಸಿಲ್‌ನ ನಿರ್ಣಯಗಳನ್ನು ಭಟ್ಕಳದ ತಂಝೀಮ್ ಸಂಸ್ಥೆಯು ಗೌರವಿಸುತ್ತದೆ ಮತ್ತು ನಮ್ಮ ನಿರ್ಣಯಗಳಿಗೆ ಅನುಗುಣವಾಗಿ ತನ್ನ ನಿರ್ಣಯವನ್ನು ಪ್ರಕಟಿಸುತ್ತದೆ ಎಂಬ ವಿಶ್ವಾಸವನ್ನು ಬಾಷಾ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಭಟ್ಕಳ ವಿಧಾನಸಭಾ ಕ್ಷೇತ್ರದ ಮುರುಡೇಶ್ವರ, ಮಂಕಿ, ವಲ್ಕಿ, ಮತ್ತು ಶರಾವತಿ ನದಿ ತೀರದ ಸ್ಥಳೀಯ ಜಮಾಅತ್‌ಗಳು ಕಾಂಗ್ರೆಸ್‌ನ್ನು ಬೆಂಬಲಿಸುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೆನರಾ ಖಲೀಜ್ ಕೌನ್ಸಿಲ್ ಕೂಡ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದ್ದು ಮುಂದಿನ ದಿನಗಳಲ್ಲಿ ತಂಝಿಮ್ ನಡೆ ಏನು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.
ನಿರ್ಧಾರ ಪ್ರಕಟಿಸದ ತಂಝೀಮ್
ಕೆನಾರ ಖಲೀಜ್ ಕೌನ್ಸಿಲ್ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಂತು ಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತಂತೆ ಇಲ್ಲಿನ ಪ್ರಮುಖ ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್‌ನ ತನ್ನ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
ರಾಜಕೀಯ ಸಂಬಂಧಿಸಿದ ನಿರ್ಣಯಗಳನ್ನು ಹಿಂದಿನಿಂದಲೂ ತಂಝೀಮ್ ಸಂಸ್ಥೆಯೇ ಕೈಗೊಳ್ಳುತ್ತಿದ್ದು, ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಕೆನರಾ ಖಲೀಜ್ ಕೌನ್ಸಿಲ್, ತಂಝೀಮ್‌ನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಕೆನರಾ ಕೌನ್ಸಿಲ್ ಎಂಬುವುದು ಕೆಲ ಬೆರಳೆಣಿಕೆಯ ಜನರು ಕುಳಿತು ಮಾಡಿರುವ ಒಂದು ಸಂಸ್ಥೆ. ಅವರು ತಮ್ಮ ಮನಸ್ಸಿಗೆ ತೋಚಿದಂತೆ ನಿರ್ಣಯವನ್ನು ಕೈಗೊಂಡಿದ್ದಾರೆ. ಭಟ್ಕಳದಲ್ಲಿ ಇನ್ನೂ ಯಾವುದೇ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಅಭ್ಯರ್ಥಿಗಳ ಘೋಷಣೆಯಾದ ಬಳಿಕ ನಾವು ಈ ಕುರಿತು ನಿರ್ಣಯ ಕೈಗೊಳ್ಳುತ್ತೇವೆ. ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದಿವೆ. ನಾವು ಯಾರನ್ನು ಬೆಂಬಲಿಸಬೇಕು ಎಂಬ ಕುರಿತು ಅಭ್ಯರ್ಥಿಗಳ ಘೋಷಣೆಯಾದ ಬಳಿಕವಷ್ಟೇ ನಿರ್ಣಯವನ್ನು ಕೈಗೊಳ್ಳಲಾಗುವುದು. ಇದಕ್ಕೂ ಪೂರ್ವ ನಿರ್ಣಯವನ್ನು ಕೈಗೊಳ್ಳುವುದು ಮೂರ್ಖತನ.

ಮುಝಮ್ಮಿಲ್‌ಕಾಝಿಯಾ, ತಂಝೀಮ್ ಅಧ್ಯಕ್ಷ
ತಂಝೀಮ್ ಸಂಸ್ಥೆಯ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ. ಅವರು ತಮ್ಮ ಏಕೈಕ ಮುಸ್ಲಿಮ್ ಅಭ್ಯರ್ಥಿಯನ್ನು ಕೈಬಿಡುವುದಿಲ್ಲ. ಖಲೀಝ್ ಕೌನ್ಸಿಲ್ ಗಲ್ಫ್ ನಲ್ಲಿ ಕುಳಿತುಕೊಂಡು ನಿರ್ಣಯ ಕೈಗೊಂಡಿದೆ ಎಂಬ ಸುದ್ದಿ ನನ್ನ ಗಮಕ್ಕೆ ಬಂದಿದೆ. ಅವರಿಗೆ ಭಟ್ಕಳ ಕ್ಷೇತ್ರದ ಸ್ಥಿತಿಗತಿಯ ಕುರಿತ ಮಾಹಿತಿ ಕೊರತೆಯಿಂದಾಗಿ ಇಂತಹ ನಿರ್ಣಯ ಕೈಗೊಂಡಿರಬಹುದು. ಆದರೆ, ತಂಝೀಮ್ ಇನ್ನೂ ನಿರ್ಣಯವನ್ನು ಕೈಗೊಂಡಿಲ್ಲ. ಅದು ನನ್ನ ಪರವಾಗಿ ನಿರ್ಣಯವನ್ನು ಕೈಗೊಳ್ಳುವ ವಿಶ್ವಾಸವಿದೆ. ಕುಮಾರಸ್ವಾಮಿ ಅವರು ಭಟ್ಕಳಕ್ಕೆ ಬಂದು ಹೋದ ನಂತರ ಸಂಪೂರ್ಣ ಚಿತ್ರಣ ಬದಲಾಗಿದೆ. ಹಿಂದೂ ಮತದಾರರು ನನ್ನ ಬೆಂಬಲಕ್ಕೆ ಇದ್ದಾರೆ. ಇಂತಹ ಸಂದರ್ಭದಲ್ಲಿ ತಂಝೀಮ್ ನನ್ನ ಪರವಾಗಿದೆ.

-ಇನಾಯತುಲ್ಲಾ ಶಾಬಂದ್ರಿ, ಜೆಡಿಎಸ್ ಅಭ್ಯರ್ಥಿ







