ರಶ್ಯಾ ವಿಮಾನ ವಾಹಕದ ವೆಚ್ಚ ಹೆಚ್ಚಳದ ಕಾರಣ ಬಹಿರಂಗ ಸಾಧ್ಯವಿಲ್ಲ: ರಕ್ಷಣಾ ಸಚಿವಾಲಯ

ಇಂಫಾಲ, ಎ. 1: ಅಡ್ಮಿರಲ್ ಗೋರ್ಸ್ಕೋವ್ ವಿಮಾನ ವಾಹಕವನ್ನು ನವೀಕರಿಸಲು ರಶ್ಯಾ ವೆಚ್ಚ ಏರಿಸುವುದನ್ನು ಒಪ್ಪಿಕೊಳ್ಳಲು ಭಾರತಕ್ಕಿರುವ ಕಾರಣವನ್ನು ರಾಷ್ಟ್ರೀಯ ಹಾಗೂ ರಾಜತಾಂತ್ರಿಕ ಹಿತಾಸಕ್ತಿಯಿಂದ ಬಹಿರಂಗಪಡಿಸಕೂಡದು ಎಂದು ರಕ್ಷಣಾ ಸಚಿವಾಲಯ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ವೆಚ್ಚ ಏರಿಕೆಗೆ ಒಪ್ಪಿಕೊಳ್ಳಲು ಕಾರಣ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಜಾರಿ ಮಾಡಿದ ಆದೇಶ ಪ್ರಶ್ನಿಸಿರುವ ರಕ್ಷಣಾ ಸಚಿವಾಲಯ ರಿಟ್ ಅರ್ಜಿ ಮೂಲಕ, ಭಾರತ ಹಾಗೂ ರಶ್ಯಾ ನಡುವಿನ ಅಂತರ್ ಸರಕಾರೀಯ ಒಪ್ಪಂದ ಇಂತಹ ವಿವರಗಳನ್ನು ಬಹಿರಂಗಗೊಳಿಸಲು ತಡೆ ಒಡ್ಡುತ್ತದೆ ಹಾಗೂ ಇದು ಮಾಹಿತಿ ಹಕ್ಕು ಕಾಯ್ದೆಯ 8(1)(ಎ) ಪರಿಚ್ಛೇದದ ವಿನಾಯಿತಿ ವಿಭಾಗದಲ್ಲಿ ಬರುತ್ತದೆ ಎಂದು ಪ್ರತಿಪಾದಿಸಿದೆ.
ಪರಸ್ಪರ ಒಪ್ಪಿಗೆ ಇಲ್ಲದೆ ಪ್ರಸಕ್ತ ಒಪ್ಪಂದದ ಅಂಶಗಳು ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ, ಪತ್ರ ವ್ಯವಹಾರಗಳನ್ನು ಬಹಿರಂಗಪಡಿಸಬಾರದು ಎಂದು ಅಂತರ್ ಸರಕಾರೀಯ ಒಪ್ಪಂದ ಕಲಮು 9 ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತ ನೀಡಿರುವ ಪಾವತಿ ಅಥವಾ ವೆಚ್ಚ ಪರಿಷ್ಕರಣೆಗೆ ಭಾರತದ ಒಪ್ಪಿಗೆ ಹಾಗೂ ಸಮಯಕ್ಕೆ ಸಂಬಂಧಿಸಿದ ಯಾವುದೇ ಹೆಚ್ಚಿನ ವಿವರ ಅಂತರ್ ಸರಕಾರೀಯ ಒಪ್ಪಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಂಸದೀಯ ನಿರ್ಣಯ ಉಲ್ಲಂಘಿಸಿದಂತಾಗುತ್ತದೆ. ದೇಶದ ಹಿತಾಸಕ್ತಿಯ ಬಗೆಗಿನ ಪೂರ್ವಾಗ್ರಹ ಹೊಂದಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.







