ದಾವಣಗೆರೆ: ರಾಹುಲ್‍ಗಾಂಧಿಯ ಕಾರ್ಯಕ್ರಮ ಯಶಸ್ವಿಗೆ ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಕರೆ
ದಾವಣಗೆರೆ,ಎ.03: ನಗರಕ್ಕೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಪ್ರಪ್ರಥಮ ಬಾರಿಗೆ ಭೇಟಿ ನೀಡುತ್ತಿರುವ ರಾಹುಲ್‍ಗಾಂಧಿಯ ಕಾರ್ಯಕ್ರಮ ಯಶಸ್ವಿಗೊಳಿಸಲು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಿ. ಬಸವರಾಜ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಗಳಾದ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ, ಜಿಲ್ಲಾ ಕಾಂಗ್ರೆಸ್ ಇಂಟಾಕ್ ವಿಭಾಗ, ಜಿಲ್ಲಾ ಇಂಟಾಕ್ ಯುವ ವಿಭಾಗ ಜಂಟಿಯಾಗಿ ರಾಹುಲ್ ಗಾಂಧಿ ಕಾರ್ಯಕ್ರಮದ ಅಂಗವಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ 2012ರಲ್ಲಿ ಮಹಾನಗರಕ್ಕೆ ಎ.ಐ.ಸಿ.ಸಿ. ಉಪಾಧ್ಯಕ್ಷರಾಗಿ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಕಛೇರಿ ಉದ್ಘಾಟಿಸಿದ್ದನ್ನು ಈ ವೇಳೆ ಸ್ಮರಿಸಿದರು. ರಾಹುಲ್‍ಗಾಂಧಿ ಅಧ್ಯಕ್ಷರಾದ ನಂತರ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನಾರ್ಶೀವಾದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ 3ನೇ ತಾರೀಖು ಸಂಜೆ 4 ಗಂಟೆ ಒಳಗಾಗಿ ಸಮಾರಂಭ ನಡೆಯುವ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದೊಳಗೆ ಬಂದು ಸೇರಬೇಕಾಗಿ ಮನವಿ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ವಿಫಲರಾಗಿದ್ದು, ಸುಳ್ಳು ಹೇಳುವುದೇ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮೀತ್ ಶಾ ಬಂಡವಾಳವಾಗಿದೆ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ. ಸುಭಾಷ್ ಚಂದ್ರ ಮಾತನಾಡಿ, ಯುವಜನರು ಮತ್ತು ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೋಸ ಅರಿತಿದ್ದು, ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಲ್ಲಾವಲಿ ಘಾಜಿಖಾನ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಕಾರ್ಮಿಕರನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷದ ಪರ ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸೋಷಿಯಲ್ ಮಿಡಿಯ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಜಿಲ್ಲಾ ಕಾಂಗ್ರೆಸ್ ಇಂಟಾಕ್ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಯುವ ಇಂಟಾಕ್ ಅಧ್ಯಕ್ಷ ಇಮ್ರಾನ್ ರಜಾ, ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಖಾಲಿದ್ ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ನಿಟ್ಟುವಳ್ಳಿ ನಾಗರಾಜ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹರೀಶ್ ಕೆಂಗನಹಳ್ಳಿ ಮಾತನಾಡಿದರು.
ದೇವರಾಜ್ ಸ್ವಾಮಿ, ಕೆಪಿಸಿಸಿ ಲೇಬರ್ ಸೇಲ್ ಕಾರ್ಯದರ್ಶಿಗಳಾದ ಆಶ್ರಫ್ ಅಲಿ, ಕೆ.ಜಿ ರಹಮತ್‍ವುಲ್ಲಾ, ಶಫೀ ಅಹ್ಮದ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೋಳಿ ಇಬ್ರಾಹಿಂ, ಜಿಲ್ಲೆಯ ಲೆಬರ್ ಸೆಲ್ ಬ್ಲಾಕ್ ಅಧ್ಯಕ್ಷರುಗಳಾದ, ಲಿಯಾಖತ್ ಅಲಿ, ಖಾಜಿ ಖಲೀಲ್, ಸಾಧೀಕ್, ಸಿ.ಎಂ. ರವಿಕುಮಾರ್ ಹಾಜರಿದ್ದರು.