ಪಂಜಾಬ್‌ನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ, ಸರಕಾರಿ ವಾಹನ ಸ್ಥಗಿತ: ಸರಕಾರ
ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತ ಬಂದ್
ಚಂಢೀಗಡ, ಎ.1: ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಗೆ ತಿದ್ದುಪಡಿ ಸೂಚಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ವಿವಿಧ ದಲಿತ ಸಂಘಟನೆಗಳು ಎ.2ರಂದು (ಇಂದು) ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಸೋಮವಾರ ಪಂಜಾಬ್ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಸರಕಾರಿ ಸಾರಿಗೆ ಸಂಸ್ಥೆಯ ವಾಹನಗಳು ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಲಿದೆ ಎಂದು ಪಂಜಾಬ್ ಸರಕಾರ ತಿಳಿಸಿದೆ.
ರಾಜ್ಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಪೂರ್ವನಿಗದಿಯಾಗಿರುವ ಸಿಬಿಎಸ್‌ಇ ಪರೀಕ್ಷೆಗಳು ಆಯ್ದ ಕೇಂದ್ರಗಳಲ್ಲಿ ನಡೆಯುತ್ತವೆ. ಆದರೆ ಪಿಎಸ್‌ಇಬಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸರಕಾರ ತಿಳಿಸಿದೆ. ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು ರಾಜ್ಯದ ವಿವಿಧೆಡೆ ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪಂಜಾಬಿನಲ್ಲಿ ಸೇನಾಪಡೆ ಸನ್ನದ್ಧ ಸ್ಥಿತಿಯಲ್ಲಿರುವ ಅಗತ್ಯವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸೇನಾ ಪಡೆಯ ನೆರವು ಬೇಕಾಗಬಹುದು ಎಂದು ರಕ್ಷಣಾ ಇಲಾಖೆಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಪಂಜಾಬ್ ಸರಕಾರದ ಕಾರ್ಯದರ್ಶಿ ಕರಣ್ ಸಿಂಗ್ ತಿಳಿಸಿದ್ದಾರೆ.
ರವಿವಾರ ಲೂಧಿಯಾನದಲ್ಲಿ ಪೊಲೀಸರು ಧ್ವಜ ಮೆರವಣಿಗೆ ನಡೆಸಿದರು. ಪಂಜಾಬ್‌ನ ಪಗ್ವಾರದಲ್ಲಿ ಸಂಪೂರ್ಣ ಬಂದ್ ಆಚರಿಸಬೇಕೆಂದು ವಾಲ್ಮೀಕಿ ಪಂಗಡದ ಮುಖಂಡ ಧರ್ಮವೀರ್ ಸೇಥಿ ಕರೆ ನೀಡಿದ್ದಾರೆ. ಈ ಮಧ್ಯೆ, ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳುವಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ದಲಿತ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ. ಪಂಜಾಬ್‌ನಲ್ಲಿ ಒಟ್ಟು ಜನಸಂಖ್ಯೆಯ ಶೇ.32ರಷ್ಟು ದಲಿತ ಸಮುದಾಯದವರು. ಪಂಜಾಬ್ ಸರಕಾರ ದಲಿತ ಸಮುದಾಯದ ಹಿತಾಸಕ್ತಿ ರಕ್ಷಿಸಲು ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.







