ಕೇರಳ ಮಡಿಲಿಗೆ ಸಂತೋಷ್ ಟ್ರೋಫಿ
ಹದಿಮೂರು ವರ್ಷಗಳ ಬಳಿಕ ಒಲಿದ ಪ್ರಶಸ್ತಿ

ಕೋಲ್ಕತಾ, ಎ.1: ಹಾಲಿ ಚಾಂಪಿಯನ್ ಬಂಗಾಳವನ್ನು ಮಣಿಸಿದ ಕೇರಳ ತಂಡ 72ನೇ ಆವೃತ್ತಿಯ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿದೆ.
ರವಿವಾರ ಇಲ್ಲಿನ ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬಂಗಾಳ ತಂಡವನ್ನು 4-2 ಅಂತರದಿಂದ ಮಣಿಸಿದ ಕೇರಳ ತಂಡ 6ನೇ ಬಾರಿ ಸಂತೋಷ್ ಟ್ರೋಫಿಯನ್ನು ಗೆದ್ದುಕೊಂಡಿದೆ. ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿದ್ದವು. ಎಂಎಸ್ ಜಿತಿನ್ 19ನೇ ನಿಮಿಷದಲ್ಲಿ ಕೇರಳಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಜಿತಿನ್ ಟೂರ್ನಿಯಲ್ಲಿ 5ನೇ ಗೋಲು ಬಾರಿಸಿದ್ದಾರೆ. 68ನೇ ನಿಮಿಷದಲ್ಲಿ ಗೋಲು ಬಾರಿಸಿದ ಬಂಗಾಳದ ನಾಯಕ ಜಿತೇನ್ ಮುರ್ಮು 1-1 ರಿಂದ ಸಮಬಲ ಸಾಧಿಸಿದರು.
ಹೆಚ್ಚುವರಿ ಸಮಯದಲ್ಲಿ ಕೇರಳದ ವಿಪಿನ್ ಥಾಮಸ್(117ನೇ ನಿಮಿಷ) ಹಾಗೂ ಇಂಜುರಿ ಟೈಮ್‌ನಲ್ಲಿ ಬಂಗಾಳದ ತೀರ್ಥಂಕರ ಸರ್ಕಾರ್ ತಲಾ ಒಂದು ಗೋಲು ಬಾರಿಸಿ ಸ್ಕೋರನ್ನು 2-2ರಿಂದ ಸಮಬಲಗೊಳಿಸಿ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನತ್ತ ಕೊಂಡೊಯ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ಉತ್ತಮ ದಾಖಲೆ ಮುಂದುವರಿಸಿದ ಕೇರಳ ಸಂತೋಷ್ ಟ್ರೋಫಿ ಜಯಿಸಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಬಂಗಾಳದ ಅಂಕಿತ್ ಹಾಗೂ ನಬಿ ಹುಸೈನ್ ಮೊದಲ ಎರಡು ಪ್ರಯತ್ನದಲ್ಲಿ ವಿಫಲರಾದರು. ಮಿಥುನ್ ಎರಡೂ ಬಾರಿ ಗೋಲನ್ನು ನಿರಾಕರಿಸಿದರು. ತೀರ್ಥಂಕರ ಹಾಗೂ ಸಂಚಾಯನ್ ಸಮದರ್ ತಲಾ ಒಂದು ಗೋಲು ಬಾರಿಸಿದರು.
ರಾಹುಲ್ ವಿ.ರಾಜ್, ಜಿತಿನ್ ಗೋಪಾಲನ್ , ಜೆಸ್ಟಿನ್ ಜಾರ್ಜ್ ಹಾಗೂ ಸೀಸಾನ್ ಎಸ್. ತಲಾ ಒಂದು ಗೋಲು ಬಾರಿಸಿ ಕೇರಳ ತಂಡ 13 ವರ್ಷಗಳ ಬಳಿಕ ಮೊದಲ ಬಾರಿ ಸಂತೋಷ್ ಟ್ರೋಫಿ ಜಯಿಸಲು ನೆರವಾದರು.







