ಮೊದಲ ಇನಿಂಗ್ಸ್ ನಲ್ಲಿ ಆಸೀಸ್‌ಗೆ ಹಿನ್ನಡೆ
ಅಂತಿಮ ಟೆಸ್ಟ್

ಜೋಹಾನ್ಸ್‌ಬರ್ಗ್,ಎ.1: ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯ ತಂಡಕ್ಕೆ ಪ್ಯಾಟ್ ಕಮಿನ್ಸ್ ಮತ್ತು ನಾಯಕ ಟಿಮ್ ಪೈನ್ ಉಪಯುಕ್ತ ಕೊಡುಗೆಯ ನೆರವಿನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 221 ರನ್ ಗಳಿಸಿದೆ.
ಟೆಸ್ಟ್‌ನ ಮೂರನೇ ದಿನವಾಗಿರುವ ರವಿವಾರ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 70 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟಾಗಿದ್ದು, 267 ರನ್‌ಗಳ ಹಿನ್ನಡೆ ಅನುಭವಿಸಿದೆ. ಎರಡನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 110 ರನ್ ಗಳಿಸಿತ್ತು. ನಾಯಕ ಮತ್ತು ವಿಕೆಟ್ ಕೀಪರ್ ಟಿಮ್ ಪೈನ್ ಔಟಾಗದೆ 5 ರನ್ ಮತ್ತು ಪ್ಯಾಟ್ ಕಮಿನ್ಸ್ 7 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಇವರು ಇಂದು ಬ್ಯಾಟಿಂಗ್ ಮುಂದುವರಿಸಿ 7ನೇ ವಿಕೆಟ್‌ಗೆ 99 ರನ್‌ಗಳ ಜೊತೆಯಾಟ ನೀಡಿದರು. ಇವರ ಹೋರಾಟದ ಫಲವಾಗಿ ಆಸ್ಟ್ರೇಲಿಯ ಕಡಿಮೆ ಮೊತ್ತಕ್ಕೆ ಆಲೌಟಾಗುವ ಭೀತಿಯಿಂದ ಪಾರಾಗಿದೆ.
ಪ್ಯಾಟ್ ಕಮಿನ್ಸ್ (50)ಅವರು ಚೊಚ್ಚಲ ಅರ್ಧಶತಕ ದಾಖಲಿಸಿದರು. ಟಿಮ್ ಪೈನ್ ಗಾಯಗೊಂಡಿದ್ದರೂ ಹೋರಾಟ ನಡೆಸಿ 96 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 62 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಅವರು ಔಟಾಗುವುದರೊಂದಿಗೆ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿತು.
ಮೊರ್ಕೆಲ್ ಗಾಯಾಳು: ವೃತ್ತಿ ಬದುಕಿನ ಕೊನೆಯ ಟೆಸ್ಟ್ ಆಡುತ್ತಿರುವ ಬೌಲರ್ ಮೊರ್ನೆ ಮೊರ್ಕೆಲ್ ಅವರು ಗಾಯಗೊಂಡು ತಂಡದಿಂದ ಹೊರಗುಳಿದರು. ಮೊರ್ಕೆಲ್ 12.2ನೇ ಓವರ್‌ನಲ್ಲಿ ಗಾಯಗೊಂಡರು. ಈ ಕಾರಣದಿಂದಾಗಿ ಏಡೆನ್ ಮರ್ಕರಮ್‌ಆ ಓವರ್‌ನ್ನು ಪೂರ್ಣಗೊಳಿಸಿದರು.
►ದಕ್ಷಿಣ ಆಫ್ರಿಕ ಎರಡನೇ ಇನಿಂಗ್ಸ್ 134/3: ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿರುವ ದಕ್ಷಿಣ ಆಫ್ರಿಕ ತಂಡ ಮೂರನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 56 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 134 ರನ್ ಗಳಿಸಿದೆ. ಆರಂಭಿಕ ದಾಂಡಿಗ ಡೀನ್ ಎಲ್ಗರ್ 39 ರನ್ ಮತ್ತು ನಾಯಕ ಎಫ್ ಡು ಪ್ಲೆಸಿಸ್ 25 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಏಡನ್ ಮರ್ಕರಮ್ 37 ರನ್, ಹಾಶಿಮ್ ಅಮ್ಲ 16 ರನ್ ಮತ್ತು ಎಬಿ ಡಿವಿಲಿಯರ್ಸ್ 6 ರನ್ ಗಳಿಸಿ ಔಟಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
►ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 136.5 ಓವರ್‌ಗಳಲ್ಲಿ ಆಲೌಟ್ 488( ಮರ್ಕರಮ್ 152, ಬವುಮಾ ಔಟಾಗದೆ 95, ಡಿ ವಿಲಿಯರ್ಸ್ 69; ಕಮಿನ್ಸ್ 83ಕ್ಕೆ 5, ಲಿಯೊನ್ 182ಕ್ಕೆ 3).
►ಆಸ್ಟ್ರೇಲಿಯ ಮೊದಲ ಇನಿಂಗ್ಸ್ 70 ಓವರ್‌ಗಳಲ್ಲಿ ಆಲೌಟ್ 221( ಪೈನ್ 62, ಖ್ವಾಜಾ 53, ಕಮಿನ್ಸ್ 50;ಫಿಲ್ಯಾಂಡರ್ 30ಕ್ಕೆ 3).







