ನಾಪೊಕ್ಲು: ಕೊಡವ ಸಮಾಜದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೆಳನ

ನಾಪೊಕ್ಲು, ಎ.02: ಲಯನ್ಸ್ ಸಂಸ್ಥೆಯು ಸಾಮಾಜಿಕ ಪರಿವರ್ತನೆಗಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ವಿವಿಧ ಸೇವಾ ಕಾರ್ಯಗಳಲ್ಲಿ ನಿರತವಾಗಿದೆ ಎಂದು ಮಂಗಳೂರು ಸೇಂಟ್ ಆಗ್ನೆಸ್ ಕಾಲೇಜಿನ ಆಂಗ್ಲಭಾಷಾ ವಿಭಾಗದ ಡಾ. ಮಾಲಿನಿ ಹೆಬ್ಬಾರ್ ಹೇಳಿದರು.
ಅವರು ಇಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಲಯನ್ಸ್ ಸದಸ್ಯರು ತಮ್ಮ ವೈಯಕ್ತಿಕ ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳದೆ ತಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ. ಸದಸ್ಯರು ಸೇವಾ ಮನೋಭಾವದಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಕೇಟೋಳಿರ ರತ್ನ ಚರ್ಮಣ್ಣ ಮಾತನಾಡಿ, ಲಯನ್ಸ್ ಪ್ರಾಂತೀಯ ಸಮ್ಮೇಳನವನ್ನು ಪರಿವರ್ತನೆ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾಗಿದ್ದು ನಮ್ಮ ಆಲೋಚನೆಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಬದಲಾವಣೆ ಆಗಬೇಕಿದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಮಾಜಿ ರಾಜ್ಯಪಾಲ ಪಿ.ಎ.ಮುತ್ತಣ್ಣ, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಬಿ.ಎಂ.ಬೋಪಯ್ಯ, ಮಾಜಿ ಪ್ರಾಂತೀಯ ಅಧ್ಯಕ್ಷರು, ಕಾರ್ಯದರ್ಶಿ ಕೆ.ಎಸ್.ಕುಟ್ಟಪ್ಪ, ಖಜಾಂಚಿ ಕೆ.ಪಿ.ಮುದ್ದಯ್ಯ, ನಾಪೊಕ್ಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಕೇಟೋಳಿರ ರಾಜಾಚರ್ಮಣ ಲಯನ್ಸ್ ಮಾಜಿ ರಾಜ್ಯಪಾಲ ಪಿ.ಎ.ಮುತ್ತಣ್ಣ, ಕಾರ್ಯದರ್ಶಿ ಎಂ.ಎಂ.ವಿನಯ್, ಖಜಾಂಚಿ ರೇಷ್ಮಾ ಉತ್ತಪ್ಪ, ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಹತ್ತು ಲಯನ್ಸ್ ಸಂಸ್ಥೆಗಳಲ್ಲದೆ ದಕ್ಷಿಣ ಕನ್ನಡ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಲಯನ್ಸ್ ಸಂಸ್ಥೆಯ ಸದಸ್ಯರುಗಳು ಆಗಮಿಸಿದ್ದರು. ಡಾ. ಜಾಲಿಬೋಪಯ್ಯ ಸ್ವಾಗತಿಸಿದರು. ಪಂಚಮ್ ತಿಮ್ಮಯ್ಯ ಅತಿಥಿಗಳ ಪರಿಚಯ ಮಾಡಿ ಕೆ.ಎಸ್ ಕುಟ್ಟಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.







