ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೇರಿ ಮೂವರ ವಿರುದ್ಧ ದೂರು
ಬಿಜೆಪಿ ಚಾರ್ಜ್ಶೀಟ್ನಲ್ಲಿ ಪ್ರತಿಭಾ ಕುಳಾಯಿ ಫೋಟೊ

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಮಂಗಳೂರು, ಎ. 2: ಭಾರತೀಯ ಜನತಾಪಾರ್ಟಿ ಬೆಂಗಳೂರಿನಲ್ಲಿ ನಿನ್ನೆ ಬಿಡುಗಡೆ ಮಾಡಿದ ಕಾಂಗ್ರೆಸ್ ವಿರುದ್ಧದ ಚಾರ್ಜ್ಶೀಟ್ನಲ್ಲಿ ತನ್ನ ಫೋಟೊ ಹಾಕಿ ವಿನಾ ಕಾರಣ ಮಾನಸಿಕ ಹಿಂಸೆ ನೀಡಿರುವುದಾಗಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ನಾಯಕರಾದ ರವಿ ಶಂಕರ್ ಪ್ರಸಾದ್ ಸೇರಿದಂತೆ ಮೂವರು ನಾಯಕರ ವಿರುದ್ಧ ಕಾರ್ಪೊರೇಟರ್ ಹಾಗೂ ಕರ್ನಾಟಕ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
‘‘ನನಗೆ ಸಂಬಂಧಪಡದ ವಿಷಯದಲ್ಲಿ ನನ್ನ ಫೋಟೊವನ್ನು ಹಾಕಿ ಮಾನಹಾನಿಕಾರಕ ಹೇಳಿಕೆಗಳನ್ನು ಹಾಕುವ ಮೂಲಕ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಹಾಗೂ ಅದರ ನಾಯಕರು ಅವಮಾನ ಮಾಡಿದ್ದಾರೆ. ಈ ಬಗ್ಗೆ ಮಾನನಷ್ಟ ಮೊಕದ್ದಮೆಯನ್ನೂ ಹೂಡುವುದಾಗಿ’’ ಪ್ರತಿಭಾ ಕುಳಾಯಿ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯು ನಿನ್ನೆ ಬಿಡುಗಡೆಗೊಳಿಸಿದ ಚಾರ್ಜ್ಶೀಟ್ ಪುಸ್ತಕದಲ್ಲಿ ‘‘ಬಿಬಿಎಂಪಿಯಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಸೀರೆಯನ್ನು ಎಳೆದಾಡಿದ್ದಂತೂ ಕಾಂಗ್ರೆಸ್ ನೆರಳಲ್ಲಿ ದುರುಳ ಶಕ್ತಿಗಳ ಉಪಟಳ ಎಷ್ಟು ಹೆಚ್ಚಿದೆ ಎಂಬುದಕ್ಕೆ ನಿದರ್ಶನವಾಗಿದೆ. ಹಾಗೆಯೇ ಶಾಸಕ ಮುನಿರತ್ನ ಬೆಂಬಲಿಗರ ಮರ್ಜಿಯಲ್ಲಿರಲು ನಿರಾಕರಿಸಿದ ಬಿಜೆಪಿ ಪಾಲಿಕೆ ಸದಸ್ಯೆ ಮಮತಾ ವಾಸುದೇವ್ ಅವರಿಗೆ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ. ಸುಳ್ಳು ಮೊಕದ್ದಮೆ ಹೂಡಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ ನಡೆಯುತ್ತಿದೆ. ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್ ಮುಖಂಡರಿಗೆ ತಮ್ಮದೇ ಶಾಸಕ, ಮಹಿಳಾ ಜನಪ್ರತಿನಿಧಿಗಳಿಗೆ ನೀಡುತ್ತಿರುವ ಕಿರುಕುಳ ಕಾಣುವುದಿಲ್ಲ’’ ಎಂಬ ಹೇಳಿಕೆಯನ್ನು ಪ್ರಕಟಸಲಾಗಿದೆ. ಈ ಹೇಳಿಕೆಗೆ ನನ್ನ ಫೋಟೊವನ್ನು ಹಾಕಿ ನನಗೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಪ್ರತಿಭಾ ಕುಳಾಯಿ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವರ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧವೂ ದೂರು ನೀಡಿದ್ದಾರೆ.
‘‘ನನಗೆ ಸಂಬಂಧಪಡದ ವಿಷಯದಲ್ಲಿ ನನ್ನ ಫೋಟೊವನ್ನು ಹಾಕಲಾಗಿದೆ. ಇದರಿಂದಾಗಿ ನಾನು ನಿನ್ನೆಯಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ರಾಷ್ಟ್ರೀಯ ಪಕ್ಷವೊಂದು ಈ ರೀತಿಯಾಗಿ ವರ್ತಿಸುತ್ತಿರುವುದು ಮೂರ್ಖತನದ ಪರಮಾವಧಿ. ಮಾನಸಿಕವಾಗಿ ನನ್ನ ನೆಮ್ಮದಿಯನ್ನು ಹಾಳು ಮಾಡಿರುವ ಈ ಘಟನೆ ವಿರುದ್ಧ ನಾನು ಹೋರಾಟ ಮುಂದುವರಿಸಲಿದ್ದೇನೆ’’ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.







