ಮೋದಿ ಸರಕಾರದ ಕೃಷಿ ವಿರೋಧಿ ನೀತಿಗಳಿಂದ ರೈತರ ಆತ್ಮಹತ್ಯೆ ಹೆಚ್ಚಳ: ಅಮಿತ್ ಶಾಗೆ ರಾಮಲಿಂಗಾರೆಡ್ಡಿ ತಿರುಗೇಟು

ಬೆಂಗಳೂರು, ಎ.2: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಜಾರಿಗೆ ತಂದ ಕೃಷಿ ವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ವಾರ್ಷಿಕ 12 ಸಾವಿರ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.
ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವ ಅಮಿತ್ ಶಾ, ತಮ್ಮ ಪಕ್ಷದ ಆಡಳಿತವಿರುವ ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಗೆ ತೆರಳಿ ರೈತರ ಆತ್ಮಹತ್ಯೆಗಳನ್ನು ತಡೆಯಲಿ ಎಂದರು.
ನರೇಂದ್ರಮೋದಿ ಹಾಗೂ ಅಮಿತ್ ಶಾ ಪ್ರೀತಿ, ಓಲೈಕೆ ಏನಿದ್ದರೂ ಕೈಗಾರಿಕೋದ್ಯಮಿಗಳ ಪರ ಎಂಬುದು ಜಗಜ್ಜಾಹೀರಾಗಿದೆ. ಆದುದರಿಂದ ಹೋದಕಡೆಯಲ್ಲೆಲ್ಲಾ ರೈತರ ಪರ ಮೊಸಳೆ ಕಣ್ಣೀರು ಸುರಿಸುವುದನ್ನು ಅಮಿತ್ ಶಾ ನಿಲ್ಲಿಸಲಿ ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 8651, ಮಧ್ಯಪ್ರದೇಶದಲ್ಲಿ 4098, ತೆಲಂಗಾಣದಲ್ಲಿ 3037 ಹಾಗೂ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 3781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ 2667 ಪ್ರಕರಣಗಳು ದಾಖಲಾಗಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 1 ರಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮೃತ ರೈತರ ಕುಟುಂಬಗಳ 1 ಲಕ್ಷ ರೂ.ವರೆಗಿನ ಸಾಲಮನ್ನಾ ಆದೇಶ ಮಾಡಲಾಗಿದೆ. ಕಾನೂನಿನ ಮೂಲಕ ಫೈನಾನ್ಸ್ ಕಂಪೆನಿಗಳಿಗೆ ಮೂಗುದಾರ ಹಾಕಿದ್ದೇವೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಶೇ.65ರಷ್ಟು ಉದ್ಯೋಗ ಸೃಷ್ಟಿಸುವುದು ಕೃಷಿ ವಲಯ. ನರೇಂದ್ರ ಮೋದಿ ಸರಕಾರ ಕೃಷಿ ವಲಯಕ್ಕೆ ಯಾವ ಆದ್ಯತೆ ಕೊಟ್ಟಿದೆ ಎಂಬುದನ್ನು ಅಮಿತ್ ಶಾ ಬಹಿರಂಗಪಡಿಸಲಿ. ಬ್ಯಾಂಕ್ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದವರ ಮೇಲೆ ಶಾ-ಮೋದಿ ತೋರಿಸಿರುವ ಸಹಾನುಭೂತಿ ರೈತರ ಮೇಲೆ ತೋರಿಸಿದ್ದರೆ, ದೇಶದಲ್ಲಿ ವಾರ್ಷಿಕ 12 ಸಾವಿರ ರೈತರ ಆತ್ಮಹತ್ಯೆ ತಡೆಯಬಹುದಾಗಿತ್ತು ಎಂದು ಅವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು, ರಾಜ್ಯ ಸರಕಾರವು ಹಲವು ಬಾರಿ ಮನವಿ ಮಾಡಿದ್ದರೂ ಕೇಂದ್ರ ಸರಕಾರ ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ಸಿಂಗ್ ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಹಾವೇರಿಯಲ್ಲಿ ಗೋಲಿಬಾರ್ ನಡೆಸಿದ್ದ ಯಡಿಯೂರಪ್ಪ ಇದೀಗ ಯಾವ ಮುಖದೊಂದಿಗೆ ಹಸಿರು ಶಾಲು ಧರಿಸಿ, ರೈತರ ಮನೆಗೆ ತೆರಳಿ ಮುಷ್ಠಿ ಅಕ್ಕಿ ಸಂಗ್ರಹಿಸುತ್ತಿದ್ದಾರೆ. ಯಡಿಯೂರಪ್ಪ ಹಸಿರು ಶಾಲಿಗೆ ಗೋಲಿಬಾರ್‌ನಲ್ಲಿ ಮೃತಪಟ್ಟ ಅಮಾಯಕ ರೈತರ ಮೆತ್ತಿದ ರಕ್ತ ಇನ್ನೂ ಮಾಸಿಲ್ಲ ಎಂದು ಅವರು ಹೇಳಿದರು.
20-20 ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ವಿಧಾನಪರಿಷತ್ತಿನಲ್ಲಿ ರೈತರ ಸಾಲ ಮನ್ನಾ ಕುರಿತು ಉತ್ತರಿಸುತ್ತ ರೈತರ ಸಾಲ ಮನ್ನಾ ಮಾಡಲು ನಾನು ನೋಟು ಮುದ್ರಣ ಮಾಡುವ ಯಂತ್ರ ಇಟ್ಟುಕೊಂಡಿಲ್ಲ ಎಂಬ ಹಾರಿಕೆಯ ಉತ್ತರ ಕೊಟ್ಟಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದಾರೆ. ಕಾನೂನು ಸಚಿವರಿಗೆ ಕಾನೂನು ಗೊತ್ತಿಲ್ಲ, ಎನ್‌ಸಿಆರ್‌ಬಿ ಅಂಕಿ ಅಂಶಗಳನ್ನು ಅವರಿಗೆ ಕಳುಹಿಸಿಕೊಡುತ್ತೇನೆ. ಸರಿಯಾಗಿ ಅದನ್ನು ನೋಡಲಿ ಎಂದು ಅವರು ಹೇಳಿದರು.
ಕಾನೂನು ಸುವ್ಯವಸ್ಥೆ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಆರ್.ಅಶೋಕ್, ಶೋಭಾ ಕರಂದ್ಲಾಜೆಯನ್ನು ಆಹ್ವಾನಿಸಲಾಗಿತ್ತು. ಆದರೆ, ಒಬ್ಬರೂ ಬರಲಿಲ್ಲ. ಈಗಲೂ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮಗ ವಿಜಯೇಂದ್ರ ಅಲ್ಲ, ಸ್ವತಃ ಯಡಿಯೂರಪ್ಪ ಸ್ಪರ್ಧಿಸಿದರೂ ಗೆಲ್ಲಲ್ಲು ಸಾಧ್ಯವಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಈಶಾನ್ಯ ರಾಜ್ಯಗಳ ಜನರನ್ನೆ ಬಿಜೆಪಿಯವರು ಬಾಂಗ್ಲಾದೇಶಿಯರು ಎಂದು ತಿಳಿದುಕೊಂಡಿದ್ದಾರೆ. ದೇಶದ ಗಡಿಯನ್ನು ಕೇಂದ್ರದ ಭದ್ರತಾ ಪಡೆಗಳು ಕಾಯುತ್ತಿವೆ. ಬಾಂಗ್ಲಾ ವಲಸಿಗರು ದೇಶದ ಗಡಿಯೊಳಗೆ ಪ್ರವೇಶಿಸದಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.







