ಫಾರೂಕ್ ಅಬ್ದುಲ್ಲಾ ನನ್ನ ವಿರುದ್ಧ ಕಣಕ್ಕಿಳಿದರೂ ಗೆಲುವು ನನ್ನದೇ: ಝಮೀರ್‌ಅಹ್ಮದ್ ಖಾನ್

ಬೆಂಗಳೂರು, ಮಾ.2: ಜೆಡಿಎಸ್ ಪಕ್ಷದಿಂದ ನನ್ನ ವಿರುದ್ಧ ಅಲ್ತಾಫ್‌ಖಾನ್ ಅಲ್ಲ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ಕರೆ ತಂದು ಅಭ್ಯರ್ಥಿಯನ್ನಾಗಿಸಿ ಚುನಾವಣಾ ಕಣಕ್ಕಿಳಿಸಲಿ ಎಂದು ಶಾಸಕ ಝಮೀರ್‌ಅಹ್ಮದ್‌ಖಾನ್ ಸವಾಲು ಹಾಕಿದ್ದಾರೆ.
ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್‌ರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ವಿರುದ್ಧ ಸ್ಪರ್ಧಿಸಲು ಕರ್ನಾಟಕದಲ್ಲಿರುವ ಮುಸ್ಲಿಮರು ಸಾಕಾಗುವುದಿಲ್ಲ. ದೇವೇಗೌಡರಿಗೆ ಆಪ್ತರಾಗಿರುವ ಫಾರೂಕ್ ಅಬ್ದುಲ್ಲಾರನ್ನು ಕರೆಸಿ ನನ್ನ ವಿರುದ್ಧ ಕಣಕ್ಕಿಳಿಸಿದರೂ ಚಾಮರಾಜಪೇಟೆ ಕ್ಷೇತ್ರದಲ್ಲಿ ಗೆಲುವು ನನ್ನದೇ ಎಂದು ಝಮೀರ್‌ಅಹ್ಮದ್‌ಖಾನ್ ವಿಶ್ವಾಸ ವ್ಯಕ್ತಪಡಿಸಿದರು.
ನಾನು ನಾಲ್ಕೂವರೆ ಅಡಿ ಇದ್ದೇನೆ ಎಂದು ಹೇಳಿದ್ದಾರೆ. ಸಚಿನ್ ತೆಂಡುಲ್ಕರ್ ಮೂರುವರೆ ಅಡಿ ಎತ್ತರ ಇದ್ದಾರೆ. ಅಮಿತಾಬ್ ಬಚ್ಚನ್ 7 ಅಡಿ ಎತ್ತರ ಇದ್ದಾರೆ. ಆದರೂ, ಅಮಿತಾಬ್ ಬಚ್ಚನ್‌ಗಿಂತ ಸಚಿನ್ ಜನಪ್ರಿಯ ಅಲ್ಲವೆ? ಅದೇ ರೀತಿ ನಾನು ಸಚಿನ್ ಅವರಂತೆ ಜನಪ್ರಿಯ ಎಂದು ಅಲ್ತಾಫ್‌ಖಾನ್‌ಗೆ ತಿರುಗೇಟು ನೀಡಿದರು.
ಟಿ.ಎ.ಶರವಣ ರಾಜಕಾರಣಿಯೇ ಅಲ್ಲ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಚಿನ್ನದ ವ್ಯಾಪಾರ ಮಾಡಿಕೊಂಡು ದೇವೇಗೌಡರ ಮಕ್ಕಳ ಜೊತೆ ಇದ್ದು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ನನ್ನ ಹೇಳಿಕೆಗೆ ಈಗಲೂ ಬದ್ಧ. ಈ ಚುನಾವಣೆಯಲ್ಲಿ ನಾನು ಸೋತರೆ ನನ್ನ ಕತ್ತು ಕತ್ತರಿಸಿ ಮಾಧ್ಯಮದ ಮುಂದೆ ಇಡುತ್ತೇನೆ ಎಂದು ಅವರು ಹೇಳಿದರು.
ನಾನೇನಾದರೂ ಅಲ್ತಾಫ್‌ಖಾನ್ ಕಾಲು ಹಿಡಿದುಕೊಂಡು ಸಹಾಯ ಕೇಳಿದ್ದು ಸಾಬೀತು ಮಾಡಿದರೆ, ಈ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. 300 ಕೋಟಿ ರೂ.ಅಲ್ಲ, 1000 ಕೋಟಿ ರೂ.ಆದರೂ ತೊಂದರೆ ಇಲ್ಲ. ಬೇಕಾದರೆ ಸಿಬಿಐ ಮೂಲಕ ತನಿಖೆ ಮಾಡಿಸಲಿ ಎಂದು ಝಮೀರ್‌ಅಹ್ಮದ್‌ಖಾನ್ ಸವಾಲು ಹಾಕಿದರು.
ಪುಲಿಕೇಶಿನಗರ ಕ್ಷೇತ್ರದಿಂದ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಖಚಿತ ಪಡಿಸಿಕೊಳ್ಳುವ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನಾವು ಏಳು ಜನರಿಗೆ ಟಿಕೆಟ್ ಖಚಿತ ಪಡಿಸಿದ್ದಾರೆ. ಪುಲಿಕೇಶಿನಗರದಿಂದ ಮಾಜಿ ಶಾಸಕ ಪ್ರಸನ್ನ ಕುಮಾರ್ ಟಿಕೆಟ್ ಕೇಳುವುದು ತಪ್ಪಲ್ಲ. ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ಅವರ ತಂದೆಯೂ ಶಾಸಕರಾಗಿದ್ದರು. ಹೈಕಮಾಂಡ್ ಮೇಲೆ ನಮಗೆ ವಿಶ್ವಾಸ ಇದೆ ಎಂದು ಝಮೀರ್‌ಅಹ್ಮದ್‌ಖಾನ್ ಹೇಳಿದರು.







