ನೀತಿ ಸಂಹಿತೆ ಉಲ್ಲಂಘನೆ: 1 ಕೋಟಿ ನಗದು, ಮದ್ಯ, ಚಿನ್ನ, ಸೀರೆ ವಶ

ಬೆಂಗಳೂರು, ಎ.2: ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ 1,156 ಪ್ಲೈಯಿಂಗ್ ಸ್ಕ್ವಾಡ್ ಮತ್ತು 1,255 ಸ್ಪಾಟಿಕ್ ಸರ್ವೆಲೆನ್ಸ್ ಟೀಮ್ಸ್‌ಗಳ ಕಾರ್ಯಾಚರಣೆಯಿಂದಾಗಿ 12537 ಗೋಡೆಬರಹಗಳು, 17693 ಪೋಸ್ಟರ್‌ಗಳು ಮತ್ತು 7,711 ಬ್ಯಾನರ್‌ಗಳನ್ನು 24 ಗಂಟೆಗಳಲ್ಲಿ ಸಾರ್ವಜನಿಕ ಸ್ಥಳಗಳಿಂದ ತೆಗೆದು ಹಾಕಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಹೇಳಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಖಾಸಗಿ ಜಾಗಗಳಲ್ಲಿ ಒಟ್ಟು 6,866 ಗೋಡೆ ಬರಹ, 7,949 ಪೋಸ್ಟರ್‌ಗಳು ಮತ್ತು 2,543 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದು ಹಾಕಲಾಗಿದ್ದು, ಈ ಸಂಬಂಧ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಫ್ಲೈಯಿಂಗ್ ಸ್ಕ್ವಾಡ್‌ಗಳು 8,56,850 ರೂ.ನಗದು, 96 ಕುಕ್ಕರ್‌ಗಳು, 550 ಸೀರೆಗಳು, 38 ಹೊಲಿಗೆ ಯಂತ್ರಗಳು, 5 ವಾಹನಗಳು, 3 ಲೀ ಮದ್ಯವನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಂಡಿವೆ. ಒಟ್ಟಾರೆ ಫ್ಲೈಯಿಂಗ್ ಸ್ಕ್ವಾಡ್‌ಗಳು 1,71,47,570 ನಗದು, 49,17.00 ಮೌಲ್ಯದ 139 ಲೀ.ಮದ್ಯ, 558 ಸೀರೆಗಳು ಮತ್ತು 2 ಕೆಜಿ 464 ಗ್ರಾಮ್ ಚಿನ್ನ, 160 ಲ್ಯಾಪ್‌ಟಾಪ್ ಮತ್ತು 8 ವಾಹನಗಳನ್ನು ವಶಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಅಬಕಾರಿ ಇಲಾಖೆಯು 409 ಲೀ. ಮದ್ಯವನ್ನು ವಶಪಡಿಸಿಕೊಂಡು 42 ಪ್ರಕರಣಗಳನ್ನು ದಾಖಲಿಸಿದ್ದು, ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದವರ ವಿರುದ್ಧ 7 ಪ್ರಕರಣಗಳನ್ನು ದಾಖಲಿಸಿದೆ. ಒಟ್ಟಾರೆಯಾಗಿ 2675.30 ಲೀ.ನಷ್ಟು ಮದ್ಯವನ್ನು ವಶಪಡಿಸಿಕೊಂಡು 158 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 201 ಪ್ರಕರಣಗಳು ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ 262 ಪ್ರಕರಣಳನ್ನು ದಾಖಲಿಸಿದೆ ಎಂದು ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆ: 4957 ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದ್ದು, 239 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. ಹಾಗೂ 269 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ ಹಾಗೂ ಚುನಾವಣೆ ಘೋಷಣೆಯಾದ ದಿನಾಂಕದಿಂದ ಒಟ್ಟಾರೆ 31,992 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ. ಒಂದು ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. 2369 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 994 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 4092 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.







