ಮುಕ್ತ ಚುನಾವಣೆ ನಡೆಸಲು ಬಿಗಿ ಪೊಲೀಸ್ ಬಂದೋಬಸ್ತ್: ಡಿಜಿಪಿ ನೀಲಮಣಿ ಎನ್.ರಾಜು
ಬೆಂಗಳೂರು, ಎ. 2: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಕೋರಮಂಗಲ ಕೆಎರ್ಸಾಪಿ ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು.
ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಅತಿಸೂಕ್ಷ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಿ ಅಗತ್ಯತೆಗೆ ಅನುಸಾರವಾಗಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗುವುದು ಎಂದ ಅವರು, ಭದ್ರತೆ ಕಲ್ಪಿಸುವ ಸಂಬಂಧ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ತಿಳಿಸಿದರು.
ಚುನಾವಣಾ ಕಾನೂನು ಹಾಗೂ ಚುನಾವಣಾ ನೀತಿ ಸಂಹಿತೆ ಪಾಲಿಸಲು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಚುನಾವಣಾ ಅಕ್ರಮಗಳಿಗೆ ಪೊಲೀಸರೇನಾದರು ನೆರವಾದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೀಲಮಣಿ ರಾಜು ಎಚ್ಚರಿಕೆ ನೀಡಿದರು.
ಪೊಲೀಸರ ಶ್ರಮ ಶ್ಲಾಘನೀಯ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮಾತನಾಡಿ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಪೊಲೀಸರು ಹಗಲಿರುಳು ಶ್ರಮಿಸಲಿದ್ದಾರೆ ಎಂದು ಶ್ಲಾಘಿಸಿದರು.
ಚುನಾವಣೆಗಳಿರಲಿ, ಹಬ್ಬಹರಿದಿನಗಳಿರಲಿ ಇನ್ಯಾವುದೇ ಜನ ಸೇರುವ ಆಚರಣೆಗಳಿರಲಿ, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಮನೆ-ಮಠ ಬಿಟ್ಟು ಕಾರ್ಯನಿರ್ವಹಿಸಿದ್ದು, ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ರತ್ನಪ್ರಭಾ ಬಣ್ಣಿಸಿದರು.
ರಾಜ್ಯದಲ್ಲಿ ಶೀಘ್ರದಲ್ಲೆ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಕೈಗೊಳ್ಳಲಿದೆ. ಇಲಾಖೆಯಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿದೆ ಎಂದ ಅವರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ಅಭಿನಂದನೀಯ ಎಂದರು.
ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಎಡಿಜಿಪಿ ಭಾಸ್ಕರ್ ರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರ್ಕೆಸ್ಟ್ರಾ, ನಂಗಾನಾಚ್‌ಗೆ ಬ್ರೇಕ್
‘ಚುನಾವಣಾ ಪ್ರಚಾರ ಸಭೆಗಳಲ್ಲಿ ಆರ್ಕೇಸ್ಟ್ರಾ, ನಂಗಾನಾಚ್‌ಗೆ ಅವಕಾಶವಿಲ್ಲ. ಅವುಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲೂ ವಾದ್ಯಗೋಷ್ಠಿ, ಅಶ್ಲೀಲ ನೃತ್ಯ ನಡೆಸುವುದು ಕಂಡು ಬಂದರೆ ಸಂಘಟಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗಿದೆ’
-ನೀಲಮಣಿ ಎನ್.ರಾಜು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ







